Advertisement

ಹಸಿರು ನ್ಯಾಯಪೀಠದ ಚಾಟಿಗೆ ಎಚ್ಚೆತ್ತ ಪಾಲಿಕೆ

11:09 AM Oct 22, 2022 | Team Udayavani |

ಹುಬ್ಬಳ್ಳಿ: ಹಸಿರು ನ್ಯಾಯಪೀಠ ಬೀಸಿರುವ ಚಾಟಿಗೆ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಅನಧಿಕೃತ ಫ್ಲೆಕ್ಸ್‌, ಬಂಟಿಂಗ್ಸ್‌, ಹೋಲ್ಡಿಂಗ್‌ಗಳ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆರಂಭದಲ್ಲಿ ಮುಟ್ಟುಗೋಲು ಹಾಕಿಕೊಂಡು ಎಚ್ಚರಿಕೆ ನೀಡಲಾಗುತ್ತಿದ್ದು, ಎರಡನೇ ಹಂತವಾಗಿ ದಂಡ ಹಾಗೂ ಕ್ರಿಮಿನಲ್‌ ಮೊಕದ್ದಮೆ ಪ್ರಯೋಗಕ್ಕೆ ನಿರ್ಧರಿಸಲಾಗಿದೆ.

Advertisement

ಘನತ್ಯಾಜ್ಯ ನಿರ್ವಹಣಾ ನಿಯಮ-2016 ಜಾರಿಯಾಗಿ ಆರು ವರ್ಷ ಕಳೆದರೂ ಕೆಲ ಅಂಶಗಳು ಕಾರ್ಯರೂಪಕ್ಕೆ ಬರಲಿಲ್ಲ. ಇದಕ್ಕಾಗಿ ಹಸಿರು ನ್ಯಾಯಪೀಠ ರಾಜ್ಯ ಸರಕಾರಕ್ಕೆ ಸುಮಾರು 2900 ಕೋಟಿ ರೂ. ದಂಡ ವಿಧಿಸಿದೆ. ಆಗಿರುವ ಹಾಗೂ ಮುಂದಾಗುವ ಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಅಗತ್ಯವೆಂದು ಎಚ್ಚರಿಕೆ ನೀಡಿದೆ.

ಇನ್ನೂ ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ನ್ಯಾ| ಸುಭಾಸ ಅಡಿ ಅವರು ಪಾಲಿಕೆ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಮುಜುಗರಕ್ಕೀಡಾಗಿರುವ ಪಾಲಿಕೆ ಅಧಿಕಾರಿಗಳು ಪರಿಸರ ಸಂರಕ್ಷಣಾ ಕಾನೂನುಗಳ ಅನುಷ್ಠಾನಕ್ಕೆ ಮುಂದಡಿಯಿಟ್ಟಿದ್ದಾರೆ. ಈಗಾಗಲೇ ನಗರದಲ್ಲಿ ಅನಧಿಕೃತವಾಗಿ ಹಾಕಿರುವ ಬ್ಯಾನರ್‌, ಫಲಕ, ಹೋಲ್ಡಿಂಗ್ಸ್‌, ಬಂಟಿಂಗ್ಸ್‌ಗಳ ವಿರುದ್ಧ
ಕಾರ್ಯಾಚರಣೆ ಕೈಗೊಂಡಿದ್ದಾರೆ.

ವಲಯಗಳಿಗೆ ಹೊಣೆ: ಬೇಕಾಬಿಟ್ಟಿಯಾಗಿ ಬ್ಯಾನರ್‌, ಫ್ಲೆಕ್ಸ್‌, ಬಂಟಿಂಗ್ಸ್‌, ಹೋಲ್ಡಿಂಗ್ಸ್‌, ಪೋಸ್ಟರ್‌ ಅಳವಡಿಕೆಯಿಂದ ನಗರ ಸೌಂದರ್ಯ ಕೆಡಿಸಲಾಗುತ್ತಿದೆ. ಪರಿಸರಕ್ಕೆ ಹಾನಿ ಮಾಡಲಾಗುತ್ತಿದೆ. ಘನತ್ಯಾಜ್ಯ ನಿರ್ವಹಣೆಯ ಭಾಗವಾಗಿ ಇವುಗಳ ವಿರುದ್ಧ ಪಾಲಿಕೆ ಅಧಿಕಾರಿಗಳು ಕೊನೆಗೂ ಸಮರ ಸಾರಿದ್ದಾರೆ. ಇದಕ್ಕಾಗಿ ಆಯಾ ವಲಯದ ಸಹಾಯಕ ಆಯುಕ್ತರಿಗೆ ಹೊಣೆಗಾರಿಕೆ ನೀಡಿದ್ದು, ವಲಯವಾರು ತಂಡ ರಚಿಸಿಕೊಂಡು ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ.

ಡಿಜಿಟಲ್‌ ಜಾಹೀರಾತಿಗೆ ಒತ್ತು: ನಿರ್ವಹಣೆ ಕೊರತೆ ಪರಿಣಾಮ ಪಾಲಿಕೆ ಪರವಾನಗಿ ನೀಡಿರುವ ಹೋಲ್ಡಿಂಗ್ಸ್‌ ಮೇಲೂ ಪರಿಸರ ಸಂರಕ್ಷಣೆ ಕಾನೂನಿನ ದೃಷ್ಟಿ ಬೀರಿದೆ. ಜಾಹೀರಾತು ಫ್ಲೆಕ್ಸ್‌ ಹರಿದು ಎಲ್ಲೆಂದರಲ್ಲಿ ಬಿದ್ದು ಗಟಾರ, ಒಳಚರಂಡಿ ಸೇರುತ್ತಿವೆ. ಚಲಿಸುವ ವಾಹನಗಳ ಮೇಲೆ ಬಿದ್ದ ಉದಾಹರಣೆಗಳಿವೆ. ಹೀಗಾಗಿ ಹಂತ ಹಂತವಾಗಿ ಇಂತಹ ಹೋಲ್ಡಿಂಗ್‌ಗಳ ತೆರವಿಗೆ ಪಾಲಿಕೆ ನಿರ್ಧರಿಸಿದೆ. ಈ ಹೋಲ್ಡಿಂಗ್‌ಗಳ ಡಿಜಿಟಲೀಕರಣ ಚಿಂತನೆಯಿದೆ.

Advertisement

ಪರವಾನಗಿಗಷ್ಟೇ ಸೀಮಿತ!
ಅನಧಿಕೃತ ಹೋಲ್ಡಿಂಗ್ಸ್‌ ಪತ್ತೆ ಹಚ್ಚಿ ದಂಡ ವಿಧಿಸಿ, ಅಧಿಕೃತ ಮಾಡಿಸುವ ಕೆಲಸ ಪಾಲಿಕೆ ಮಾಡಿತು. ಆದರೆ ನಂತರದಲ್ಲಿ ಅದರ ನಿರ್ವಹಣೆ ಬಗ್ಗೆ ನಿಗಾ ವಹಿಸಿಲ್ಲ. ಹರಿದು ತುಂಡಾಗಿ ರಸ್ತೆಗೆ ಬಿದ್ದರೂ ಕ್ಯಾರೆ ಎನ್ನುವುದಿಲ್ಲ. ಪರವಾನಗಿ ನೀಡುವುದನ್ನು ಆದಾಯದ ಮೂಲವಾಗಿ ಮಾತ್ರ ಪಾಲಿಕೆ ಪರಿಗಣಿಸಿದಂತಿದ್ದು, ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ರಾತ್ರೋರಾತ್ರಿ ಪ್ರತ್ಯಕ್ಷ
ರಾತ್ರೋರಾತ್ರಿ ನಗರದ ಪ್ರಮುಖ ರಸ್ತೆಗಳಲ್ಲಿ ಅನಧಿಕೃತ ಫ್ಲೆಕ್ಸ್‌, ಬಂಟಿಂಗ್ಸ್‌ ಅಳವಡಿಸಲಾಗುತ್ತಿದೆ. ಸರಕಾರಿ ಕಚೇರಿ ಗೋಡೆಗಳಿಗೂ ಜಾಹೀರಾತುಗಳನ್ನು
ಅಂಟಿಸಲಾಗುತ್ತಿದೆ. ಅಂಟಿಸಿದವರನ್ನು ಪತ್ತೆ ಹಚ್ಚಿ ದಂಡ, ಕ್ರಿಮಿನಲ್‌ ಕೇಸ್‌ ದಾಖಲಿಸಿದ್ದರೆ ಹಿಂದೆಯೇ ಕಡಿವಾಣ ಬೀಳುತ್ತಿತ್ತು. ಪಾಲಿಕೆ ನಿರ್ಲಕ್ಷ್ಯದಿಂದಾಗಿ ಯಾವುದೇ ಕ್ರಮ ಇಲ್ಲದಂತಾಗಿದೆ. ನಿರಂತರವಾಗಿ ತೆರವು ಕಾರ್ಯಾಚರಣೆ ನಡೆದರೆ ಮಾತ್ರ ಇದಕ್ಕೆ ಕಡಿವಾಣ ಬೀಳಲಿದೆ.

ರಾಜಕೀಯ ಫ್ಲೆಕ್ಸ್‌ಗಳ ಹಾವಳಿ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳೇ ಹೆಚ್ಚಾಗಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಇಂತಹವರ ವಿರುದ್ಧ ಕಾನೂನು ಕ್ರಮ ಸಾಧ್ಯವೇ ಎನ್ನುವುದು ಪ್ರಶ್ನೆಯಾಗಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ನ್ಯಾ| ಸುಭಾಸ ಅಡಿ ಅವರು ಅಧಿಕಾರಿಗಳಿಗೆ ಕಾರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಉಪಮಹಾಪೌರರಿಗೆ ಸೂಚಿಸಿದ್ದರು. ವಿಪರ್ಯಾಸವೆಂದರೆ ಹಿರಿಯ ರಾಜಕಾರಣಿಗಳು, ಪಾಲಿಕೆ ಸದಸ್ಯರ ಭಾವಚಿತ್ರ ಇರುವ ಫ್ಲೆಕ್ಸ್‌ಗಳೇ ಎಲ್ಲೆಂದರಲ್ಲಿ ರಾರಾಜಿಸುತ್ತಿವೆ. ಮೊದಲು ಇಂತಹವರ ಮೇಲೆ ಕ್ರಮಕೈಗೊಂಡರೆ ಜನಸಾಮಾನ್ಯರಿಗೆ ಎಚ್ಚರಿಕೆ ಸಂದೇಶ ಹೋಗಲಿದೆ.

ಅನಧಿಕೃತ ಫ್ಲೆಕ್ಸ್‌, ಹೋಲ್ಡಿಂಗ್ಸ್‌, ಬಂಟಿಂಗ್ಸ್‌ ತೆರವು ಕಾರ್ಯಾಚರಣೆ ವಲಯವಾರು ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಎಚ್ಚರಿಕೆ ನೀಡಿ ಜಪ್ತಿ ಮಾಡಲಾಗುತ್ತಿದೆ. ಪುನಃ ಉಲ್ಲಂಘನೆ ಮಾಡಿದರೆ ದಂಡ ಹಾಗೂ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು. ತೆರವು ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ.

ಸಂತೋಷ ಯರಂಗಳಿ, ಕಾರ್ಯನಿರ್ವಾಹಕ
ಅಭಿಯಂತ, ಘನತ್ಯಾಜ್ಯ ನಿರ್ವಹಣಾ ವಿಭಾಗ

*ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next