ಪಾಟ್ನಾ: ಬಿಹಾರದ ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ವಿಜಿಲೆನ್ಸ್ ತನಿಖಾ ದಳ ಶನಿವಾರ (ಆಗಸ್ಟ್ 27) ದಾಳಿ ನಡೆಸಿದ್ದು, ನಾಲ್ಕು ಕೋಟಿ ರೂಪಾಯಿಗಿಂತ ಅಧಿಕ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಅಂದು ಪೇಂಟರ್ -ಪಾರ್ಥ ಸಂಬಂಧಿ ರಾಯ್ ಇಂದು ಹಲವು ಹೋಟೆಲ್ ಗಳ ಒಡೆಯ; ಸಿಬಿಐ ದಾಳಿ
ಪಾಟ್ನಾ, ಕಿಶನ್ ಗಂಜ್ ಸೇರಿದಂತೆ ಬಿಹಾರದ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ವಿಜಿಲೆನ್ಸ್ ತನಿಖಾ ದಳ ದಾಳಿ ನಡೆಸಿತ್ತು. ಲೋಕೋಪಯೋಗಿ ಇಲಾಖೆಯ ಕಿಶನ್ ಗಂಜ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜಯ್ ಕುಮಾರ್ ರಾಯ್ ನಿವಾಸದ ಮೇಲೆ ದಾಳಿ ಅಧಿಕಾರಿಗಳು ನಡೆಸಿದ್ದರು.
ಕಿಶನ್ ಗಂಜ್ ನಲ್ಲಿರುವ ರಾಯ್ ನಿವಾಸಕ್ಕೆ ಅಧಿಕಾರಿಗಳು ಬಂದ ನಂತರ, ರಾಯ್ ಪಡೆದಿರುವ ಲಂಚದ ಹಣವನ್ನು ಜ್ಯೂನಿಯರ್ ಇಂಜಿನಿಯರ್ ಮತ್ತು ಕ್ಯಾಶಿಯರ್ ನಿವಾಸದದಲ್ಲಿ ಅಡಗಿಸಿಟ್ಟಿರುವ ವಿಷಯ ಬೆಳಕಿಗೆ ಬಂದಿತ್ತು. ಬಳಿಕ ವಿಜಿಲೆನ್ಸ್ ತನಿಖಾ ದಳದ ಅಧಿಕಾರಿಗಳು ಇಬ್ಬರ ಮನೆ ಮೇಲೆ ದಾಳಿ ನಡೆಸಿದ್ದರು ಎಂದು ವರದಿ ತಿಳಿಸಿದೆ.
ಕ್ಯಾಶಿಯರ್ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದ ವೇಳೆ 3 ಕೋಟಿಗೂ ಅಧಿಕ ನಗದು ಹಾಗೂ ಸಂಜಯ್ ಕುಮಾರ್ ನಿವಾಸದಲ್ಲಿ ಒಂದು ಕೋಟಿ ರೂಪಾಯಿ ನಗದು ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.