Advertisement

ಜಲ ಸಂರಕ್ಷಣೆಗೆ ಪ್ರತಿಜ್ಞೆ-ಜಾಗೃತಿ ಅಭಿಯಾನ

06:53 AM Mar 19, 2019 | Team Udayavani |

ದಾವಣಗೆರೆ: ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮಾ. 22ರಂದು ವಿಶ್ವ ಜಲ ದಿನ ಆಚರಿಸಬೇಕು. ಜಲ ಸಂರಕ್ಷಣೆಗೆ ಪ್ರತಿಜ್ಞೆ ಸ್ವೀಕರಿಸಿ, ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಪೋಷಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಚ್‌.ಬಸವರಾಜೇಂದ್ರ ಸೂಚಿಸಿದ್ದಾರೆ.

Advertisement

ಸೋಮವಾರ, ನಗರದ ಜಿಲ್ಲಾ ಪಂಚಾಯತ್‌ನ ಸಭಾಂಗಣದಲ್ಲಿ ವಿಶ್ವ ಜಲ ದಿನಾಚರಣೆ ಕುರಿತ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ 2019ನೇ ವರ್ಷವನ್ನು ಜಲವರ್ಷ ಎಂಬುದಾಗಿ ಘೋಷಿಸಿದೆ. ಜಲವರ್ಷದ ಆಚರಣೆಗಾಗಿ ರಾಜ್ಯಾದ್ಯಂತ ವಿವಿಧ ಚಟುವಟಿಕೆಗಳ ಮೂಲಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಸಮುದಾಯ ಹಾಗೂ ಸಂಸ್ಥೆಗಳ ಸಹಯೋಗದಲ್ಲಿ ಮಾ. 22ರಂದು ವಿಶ್ವ ಜಲ ದಿನ ಆಚರಿಸಲಾಗುವುದು. ಅಂದು ಎಲ್ಲಾ ಸರ್ಕಾರಿ
ಕಚೇರಿಗಳಲ್ಲಿ ವಿಶ್ವ ಜಲ ದಿನ ಆಚರಿಸಬೇಕು ಎಂದರು.

ಜಲಾಮೃತ ಕಾರ್ಯಕ್ರಮದ ಅಂಗವಾಗಿ ಜನರಿಗೆ ನೀರಿನ ಬಗ್ಗೆ ಅರಿವು ಮೂಡಿಸಲು ಜಲ ಸಾಕ್ಷರತೆ, ಜಲ ಸಂರಕ್ಷಣೆ, ಜಲ ಪ್ರಜ್ಞೆ ಹಾಗೂ ಹಸಿರೀಕರಣ ಎಂಬ ನಾಲ್ಕು ಅಂಶ ಪರಿಚಯಿಸಲಾಗುತ್ತಿದೆ. ನೀರನ್ನು ಮಿತವಾಗಿ ಬಳಸಿ ನಾಳೆಗೂ ಉಳಿಸಿ, ನೀರು ಅಮೃತ, ನೀರಿನ ಜವಾಬ್ದಾರಿ ನನ್ನದು, ಸರ್ವರಿಗೂ ಜಲ ಸದಾಕಾಲ ಎಂಬ ಘೋಷವಾಕ್ಯಗಳ ಮೂಲಕ ಜನರಿಗೆ ನೀರಿನ ಬಳಕೆ ಮತ್ತು ಮಹತ್ವ ಹಾಗೂ ಮುಂದಿನ ಪೀಳಿಗೆಗೆ ನೀರು ಉಳಿಸಬೇಕು ಎನ್ನುವುದರ ಮಾಹಿತಿ ನೀಡಲಾಗುವುದು ಅವರು ತಿಳಿಸಿದರು.
 
ವಿಶ್ವ ಜಲ ದಿನಾಚರಣೆಗೂ ಮುನ್ನ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಕಿರು ನೀರು ಸರಬರಾಜು ಟ್ಯಾಂಕರ್‌ಗಳು, ಶಾಲೆಗಳು, ಅಂಗನವಾಡಿ, ಡೈರಿಗಳು, ಕೋ-ಆಪರೇಟಿವ್‌ ಸಂಘಗಳು, ಸರ್ಕಾರಿ ಕಟ್ಟಡಗಳ ಕಾಂಪೌಂಡ್‌ ಗೋಡೆಗಳ ಮೇಲೆ ಜಲಸಂರಕ್ಷಣಾ ಸಂದೇಶ ಮತ್ತು ಚಿತ್ರ ಪ್ರದರ್ಶಿಸಲು ಅವರು ಸೂಚಿಸಿದರು.

ವಿಶ್ವ ಜಲ ದಿನಾಚರಣೆಯಂದು ಸಮುದಾಯಗಳನ್ನು ಒಗ್ಗೂಡಿಸಿ ಪ್ರತಿಯೊಬ್ಬರೂ ಒಂದು ಸಸಿ ನೆಡಲು ಚಾಲನೆ ನೀಡಿ, ಸಸಿ ನೆಡುವ ವೀಡಿಯೊವನ್ನು ದಾಖಲಿಸಿ ಅದನ್ನು jalamrutha2019@gmail.comಗೆ ಇಮೇಲ್‌ ಮಾಡಬೇಕು. ಜಲಾಮೃತ ಕುರಿತಾದ ಸಾರ್ವಜನಿಕ ಪ್ರತಿಕ್ರಿಯೆ ದಾಖಲಿಸಬೇಕು. ಕಾರ್ಯಕ್ರಮಗಳ ಕುರಿತಾಗಿ ಜನರಿಗೆ ಕರಪತ್ರ ಹಂಚಬೇಕು ಎಂದು ತಿಳಿಸಿದರು.

ಕೃಷಿ, ತೋಟಗಾರಿಕೆ, ಅರಣ್ಯ, ನೀರಾವರಿ ಇಲಾಖೆಗಳು ಜಲಮೂಲಗಳ ಪುನಶ್ಚೇತನಕ್ಕಾಗಿ ಕೈಗೊಳ್ಳುವ ಕಾರ್ಯಕ್ರಮ ಮತ್ತು ನೀರಿಗೆ ಸಂಬಂಧಿಸಿದ ಇತರೆ ಯೋಜನೆಗಳಿಗೆ ಹೆಚ್ಚು ಗಮನ ನೀಡಬೇಕು. ಜಲ ಸಂರಕ್ಷಣೆ ಚಲನಚಿತ್ರಗಳನ್ನು ಹಳ್ಳಿಗಳಲ್ಲಿ ಪ್ರದರ್ಶಿಸಲು ಸರ್ಕಾರಕ್ಕೆ ತಾವು ಮನವಿ ಮಾಡಿ ಪತ್ರ ಬರೆಯುವುದಾಗಿ ಸಿಇಓ ತಿಳಿಸಿದರು. 

Advertisement

ಜಿ.ಪಂ. ಸಹಾಯಕ ಯೋಜನಾ ನಿರ್ದೇಶಕ ಶಶಿಧರ್‌ ಮಾತನಾಡಿ, ಕಳೆದ ಹದಿನೇಳು ವರ್ಷಗಳಲ್ಲಿ ಹದಿನಾಲ್ಕು ವರ್ಷ ನಮ್ಮ ರಾಜ್ಯ ಬರಪೀಡಿತವಾಗಿದೆ. ಇದಕ್ಕೆ ಕಾರಣ ರಾಜ್ಯದಲ್ಲಿ ಹಸಿರು ಕಡಿಮೆಯಾಗಿರುವುದು. ಪ್ರಸಕ್ತ ವರ್ಷವನ್ನು
ಜಲವರ್ಷವನ್ನಾಗಿಸಿ ಜಲ ಮರುಪೂರಣ ಯೋಜನೆ ಮತ್ತು ಎರಡು ಕೋಟಿ ಸಸಿ ನೆಡಲು ಯೋಜಿಸಲಾಗಿದೆ ಎಂದರು.

ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಆಂಜನೇಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ, ಡಿಎಚ್‌ಒ ಡಾ| ತ್ರಿಪುಲಾಂಭ, ದಾವಣಗೆರೆ, ಜಗಳೂರು, ಹೊನ್ನಾಳಿ, ಹರಿಹರ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next