ಬಳ್ಳಾರಿ: ವೀರಶೈವ ವಿದ್ಯಾವರ್ಧಕ ಸಂಘದ ಮುಂದಿನ ಮೂರು ವರ್ಷಗಳ ಅವಧಿಗೆ 30 ಜನ ನೂತನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲು ಮಾ. 21ರಂದು ಚುನಾವಣೆ ನಡೆಯಲಿದ್ದು, ಇದೇ ಫೆ. 19ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಚುನಾವಣಾಧಿಕಾರಿ ಎನ್.ಪಿ.ಲಿಂಗನಗೌಡ ಹೇಳಿದರು.
ನಗರದ ವೀರಶೈವ ವಿದ್ಯಾವರ್ಧಕ ಸಂಘದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017 ಅಕ್ಟೋಬರ್ 15ರಂದು ಚುನಾವಣೆ ನಡೆದಿತ್ತು. ಸಂಘದ ಹಾಲಿ ಸದಸ್ಯರ ಮೂರು ವರ್ಷದ ಅವ ಧಿ 2020ಕ್ಕೆ ಪೂರ್ಣಗೊಂಡಿದ್ದು, ಈಗಾಗಲೇ ಚುನಾವಣೆ ನಡೆಯಬೇಕಿತ್ತು. ಆದರೆ ಕಳೆದ ವರ್ಷ ಕೋವಿಡ್ ಸೋಂಕು ಆವರಿಸಿದ್ದರಿಂದ ಆರು ತಿಂಗಳು ವಿಳಂಬವಾಗಿದೆ. ಇದೀಗ 2021ನೇ ಸಾಲಿನಲ್ಲಿ ಚುನಾವಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಚುನಾವಣೆ ನಡೆಸಲು ಸಂಘದ ನಿವೃತ್ತ ನೌಕರರಾದ ಎನ್.ಪಿ.ಲಿಂಗನಗೌಡ ಚುನಾವಣಾಧಿಕಾರಿ, ವಿ.ಎಂ. ರಾಜಶೇಖರ್, ಎಚ್.ವಿಜಯಕುಮಾರ್, ಡಾ| ಕೆ. ತೇಜಸ್ ಮೂರ್ತಿ, ಎಸ್.ನಾಗರಾಜ್ ಸೇರಿ ನಾಲ್ವರನ್ನು ಸಹಾಯಕ ಚುನಾವಣಾ ಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ನಾಮಪತ್ರ ಅರ್ಜಿ ಶುಲ್ಕವನ್ನು 600 ರೂ., ಉಮೇದುವಾರಿಕೆ ಶುಲ್ಕವನ್ನು 6 ಸಾವಿರ ರೂ. ನಿಗದಿಪಡಿಸಲಾಗಿದೆ. ಫೆ. 19ರಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಫೆ. 26ರಂದು ಮಧ್ಯಾಹ್ನ 3 ಗಂಟೆವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಫೆ. 27ರಂದು ಬೆಳಗ್ಗೆ 11 ಗಂಟೆಯಿಂದ ನಾಮಪತ್ರ ಪರಿಶೀಲನೆ ನಡೆಸಲಾಗುತ್ತಿದ್ದು, ಪರಿಶೀಲನೆ ಮುಗಿದ ಬಳಿಕ ಅಂದು ಸಂಜೆ ಅರ್ಹತೆಯುಳ್ಳ ಉಮೇದುವಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಮಾ. 1ರಂದು ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಹಿಂಪಡೆಯಬಹುದಾಗಿದೆ. ನಂತರ ಅಂದು ಸಂಜೆ ನಾಮಪತ್ರ ಹಿಂಪಡೆದವರು ಮತ್ತು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು. ಮಾ. 21 ರಂದು ಮಧ್ಯಾಹ್ನ 1 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಕಾಲೇಜಿನಲ್ಲಿ 8 ಬೂತ್‌ಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದವರು ವಿವರಿಸಿದರು.
ಮರುದಿನ ಮಾ. 22ರಂದು ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಕಾಲೇಜು ಆವರಣದಲ್ಲೇ ಬೆಳಗ್ಗೆ 9.05ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ. ಎಣಿಕೆ ಕಾರ್ಯ ಸಂಪೂರ್ಣವಾಗಿ ಮುಗಿದ ಬಳಿಕ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ :ಚಿರತೆ ನೋಡಿ ಹುಲಿ ಎಂದ ಕಾರು ಚಾಲಕ; ವಿಡಿಯೋ ವೈರಲ್
ವೀ.ವಿ. ಸಂಘದಲ್ಲಿ ಒಟ್ಟು 2890 ಆಜೀವ ಸದಸ್ಯರು ಇದ್ದರು. ಇವರಲ್ಲಿ 2014-17ರ ಅವಧಿಯಲ್ಲಿ 200 ಸದಸ್ಯರು, 2017-21ನೇ ಸಾಲಿನ ಅವ ಧಿಯಲ್ಲಿ 101 ಸದಸ್ಯರು ಸೇರಿ ಆರು ವರ್ಷದಲ್ಲಿ ಒಟ್ಟು 301 ಸದಸ್ಯರು ನಿಧನರಾಗಿದ್ದಾರೆ.
ಸದ್ಯ 2372 ಪುರುಷ, 214 ಮಹಿಳೆಯರು ಸೇರಿ ಒಟ್ಟು 2586 ಆಜೀವ ಸದಸ್ಯರು ಇದ್ದಾರೆ. ಇವರಲ್ಲಿ ನಗರ ಪ್ರದೇಶದಲ್ಲಿನ ಸದಸ್ಯರ ಸಂಖ್ಯೆಯೇ ಹೆಚ್ಚಿದೆ. ಚುನಾವಣೆಯಲ್ಲಿ ನಗರ ಪ್ರದೇಶದಿಂದ 16, ಗ್ರಾಮೀಣ ಭಾಗದಿಂದ 14 ಸೇರಿ ಒಟ್ಟು 30 ಸದಸ್ಯರನ್ನು ಆಯ್ಕೆ ಮಾಡಬೇಕಿದ್ದು, ಪ್ರತಿಯೊಬ್ಬ ಮತದಾರರು 30 ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕು ಎಂದರು.