Advertisement
ವಿಧಾನಸೌಧ ಒಳಗೆ ಬಣ್ಣ ಬಳಿಯುವ ಹಾಗೂ ಸ್ವತ್ಛತಾ ಕಾರ್ಯ ಭರದಿಂದ ಸಾಗಿದ್ದು, ಸ್ಪೀಕರ್, ಸಭಾಪತಿ ಕಚೇರಿ, ಸಂಪುಟ ಸಭಾಂಗಣ, ಬಾಂಕ್ವೆಟ್ ಸಭಾಂಗಣ, ವಿಧಾನಸಭೆ ಮತ್ತು ವಿಧಾನಪರಿಷತ್ ಪ್ರವೇಶ ದ್ವಾರಗಳನ್ನು ಬಗೆ ಬಗೆಯ ಹೂವಿನಿಂದ ಅಲಂಕರಿಸಲಾಗಿದೆ. ವಿಧಾನಸೌಧ ಮುಂಭಾಗ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಗಣ್ಯರು-ಅತಿ ಗಣ್ಯರಿಗೆ ವಿಶೇಷ ಆಸನ ವ್ಯವಸ್ಥೆ ಮಾಡಲಾಗಿದೆ. ಸಮಾರಂಭ ಹೊರಗಿನಿಂದಲೂ ನೋಡುವಂತೆ ದೊಡ ಪರದೆಯ ಟಿವಿ ಅಳವಡಿಸಲಾಗುತ್ತದೆ. ರಾತ್ರಿ ವೇಳೆ ವಿಧಾನಸೌಧ ಸಂಪೂರ್ಣವಾಗಿ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದು, ದೀಪಾಲಂಕಾರದಲ್ಲಿ ವಿಧಾನಸೌಧ ಸೊಬಗು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ವಿಶೇಷವಾಗಿದೆ. ಪಾಲಂಕಾರಗಳಿಂದ ಕಂಗೊಳಿಸುತ್ತಿರುವ ವಿಧಾನಸೌಧ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರಿಂದ ಸೋಮವಾರ ರಾತ್ರಿಯೂ ಸಾಕಷ್ಟು ಜನರು ವಿಧಾನಸೌಧ ನೋಡಲು ಆಗಮಿಸಿ ಸೆಲ್ಫಿ ತೆಗೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ವಜ್ರ ಮಹೋತ್ಸವ ಸಮಾರಂಭವನ್ನು ಒಂದೇ ದಿನಕ್ಕೆ ಸೀಮಿತಗೊಳಿಸಿರುವುದರಿಂದ ಅ.25ರಂದು ರಾಷ್ಟ್ರಪತಿಯವರಿಂದ ವಿಧಾನಮಂಡಲದ ಜಂಟಿ ಅಧಿವೇಶನ ಭಾಷಣ ಮುಗಿದ ತಕ್ಷಣ ವಿಧಾನಸೌಧ ಮುಂಭಾಗ ದಿನವಿಡೀ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಧಾನಸೌಧ ನಿರ್ಮಾಣಕ್ಕೆ ಶ್ರಮಿಸಿದ ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ಕೆ.ಸಿ.ರೆಡ್ಡಿ, ಕಡಿದಾಳ್ ಶಾಮಣ್ಣ ಅವರ ಕುಟುಂಬದವರಿಗೆ ಬಾಂಕ್ವೆಟ್ ಸಭಾಂಗಣದಲ್ಲಿ ಸನ್ಮಾನ ಏರ್ಪಡಿಸಲಾಗಿದ್ದು ಈಗಾಗಲೇ ಆಹ್ವಾನ ಕಳುಹಿಸಲಾಗಿದೆ. ಎಲ್ಲ ಶಾಸಕರು, ಪರಿಷತ್ ಸದಸ್ಯರು, ಸಂಸದರು, ಕೇಂದ್ರ ಸಚಿವರು, ಹಿರಿಯ ರಾಜಕಾರಣಿಗಳಿಗೆ ಆಹ್ವಾನ ನೀಡಲಾಗಿದೆ. ಟಿ.ಎನ್.ಸೀತಾರಾಂ ಅಸಮಾಧಾನ
ವಜ್ರ ಮಹೋತ್ಸವದ ಸಂದರ್ಭದಲ್ಲಿ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಹೆಚ್ಚು ಮೊತ್ತ ನೀಡಲಾಗಿದೆ ಎಂದು ವಿವಾದ ಉಂಟಾಗಿದ್ದರಿಂದ “ವಿಧಾನಸಭೆ ನಡೆದು ಬಂದ ಹಾದಿ’ ಸಾಕ್ಷ್ಯಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದ ನಿರ್ದೇಶಕ ಟಿ.ಎನ್.ಸೀತಾರಾಂ ಅಸಮಾಧಾನ ಗೊಂಡಿದ್ದಾರೆ. ಶಾಸನಸಭೆ ನಡೆದುಬಂದ ದಾರಿ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ಏಳು ಚಿತ್ರದ ಪೈಕಿ ಎರಡನ್ನು ಮುಗಿಸಿದ್ದೇನೆ. ಅವರಿಗೆ ಅದನ್ನು ಕೊಟ್ಟು ಕೈ ಮುಗಿದು ಬರುತ್ತೇನೆ. ಮಿಕ್ಕ ಐದು ಚಿತ್ರ ಮಾಡಲಾರೆ. ಅವರು ಹಿಂದೆ ಹೇಳಿದಂತೆ ಪೂರ್ತಿ ಹಣ ಕೊಡುತ್ತೇನೆ ಎಂದರೂ ನನಗೆ ಬೇಡ. ಬೇರೆ ಯಾರಿಗಾದರೂ ಕೊಟ್ಟುಕೊಳ್ಳಲಿ. ಸರ್ಕಾರದ ಸಹವಾಸ ಬೇಡ. ಅವರು ಕರೆದಾಗ ನಾನು ಒಪ್ಪಬಾರದಿತ್ತು. ಒಳ್ಳೆಯ ಪ್ರೊಡಕ್ಟ್ ಮಾಡಲು ಹೋಗಿ ತೀವ್ರ ಅವಮಾನ ಮತ್ತು ನೋವು ಅನುಭವಿಸಿದೆ ಎಂದು ಸಾಮಾಜಿಕ ಜಾಲತಾಣ “ಫೇಸ್‌ಬುಕ್’ನಲ್ಲಿ ಅತೃಪ್ತಿ ಹೊರಹಾಕಿದ್ದಾರೆ. ಉಳಿದಂತೆ ಗಿರೀಶ್ ಕಾಸರವಳ್ಳಿ “ವಿಧಾನಸೌಧ ಕಟ್ಟಡ ನಿರ್ಮಾಣ’ ಕುರಿತು ಹಾಗೂ ಮಾಸ್ಟರ್ ಕಿಶನ್ ವಿಧಾನಸೌಧ 3 ಡಿ ವಚ್ಯುìಯೆಲ್ ರಿಯಾಲಿಟಿ ಸಾಕ್ಷ್ಯಚಿತ್ರ ಸಿದ್ಧಪಡಿಸಿದ್ದು ನಿಗದಿಯಂತೆ ಪ್ರದರ್ಶನಗೊಳ್ಳಲಿದೆ.