Advertisement

“ಡ್ಯಾಡ್‌’ಸ್ಕಾಲರ್‌ಶಿಪ್‌ ಬೆಳ್ತಂಗಡಿ ಕಾನರ್ಪದ ವಿದ್ಯಾಶ್ರೀ ಆಯ್ಕೆ

10:41 AM Sep 23, 2018 | |

ಬೆಳ್ತಂಗಡಿ: ಜರ್ಮನಿ ಸರಕಾರ ಪ್ರಾಯೋಜಿತ “ಡ್ಯಾಡ್‌’ ಸಂಸ್ಥೆಯು ಉನ್ನತ ವ್ಯಾಸಂಗಕ್ಕೆ ನೀಡುವ ವಿದ್ಯಾರ್ಥಿ ವೇತನಕ್ಕೆ ಬೆಳ್ತಂಗಡಿ ತಾಲೂಕಿನ ಕಾನರ್ಪ ನಿವಾಸಿ ವಿದ್ಯಾಶ್ರೀ ಎಸ್‌. ಆಯ್ಕೆಯಾಗಿದ್ದಾರೆ. ಅದರಂತೆ ವಿದ್ಯಾಶ್ರೀ, ಜರ್ಮನಿಯ ಬೊನ್‌ ವಿಶ್ವವಿದ್ಯಾನಿಲಯದಲ್ಲಿ ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯುವರು. ಮೂಲತಃ ಬೆಂಗಳೂರಿನವರಾದ ಅವರು ಕಾನರ್ಪದ ಸತ್ಯನಾರಾಯಣ ಹೊಳ್ಳ ಹಾಗೂ ಶಶಿಕಲಾ ಕೆ. ಅವರ ಪುತ್ರ ವಿಜಯ್‌ ಹೊಳ್ಳ ಅವರನ್ನು ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದರು. ಬೆಂಗಳೂರಿನ ಆರ್‌ವಿ ಕಾಲೇಜಿನಲ್ಲಿ ಬಯೋಟೆಕ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದು, ಕಂಪೆನಿಯೊಂದರಲ್ಲಿ ಕಿರಿಯ ಕೃಷಿ ವಿಜ್ಞಾನಿಯಾಗಿದ್ದರು.

Advertisement

ಆರ್ಟ್ಸ್ ಎಂಎಸ್ಸಿ ಕೋರ್ಸ್‌
ವಿದ್ಯಾಶ್ರೀ ಅವರು “ಅಗ್ರಿಕಲ್ಚರಲ್‌ ಸೈನ್ಸಸ್‌ ಆ್ಯಂಡ್‌ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ ಇನ್‌ ದಿ ಟ್ರೊಪಿಕ್ಸ್‌ ಆ್ಯಂಡ್‌ ಸಬ್‌ಟ್ರೊಪಿಕ್ಸ್‌ (ಆರ್ಟ್ಸ್)’ ಎಂಬ ವಿಷಯದ ಕುರಿತು ವ್ಯಾಸಂಗ ಮಾಡುವರು. ಈ ಬಾರಿ ಈ ಕೋರ್ಸ್‌ಗೆ ಆಯ್ಕೆಯಾದ ಏಕೈಕ ಭಾರತೀಯಳು ಎನ್ನುತ್ತದೆ ಅವರ ಕುಟುಂಬ. ಅಕ್ಟೋಬರ್‌ನಿಂದ ಕೋರ್ಸ್‌ ಆರಂಭ ವಾಗಲಿದ್ದು, ಅವರು ಜರ್ಮನಿಗೆ ತೆರಳಿದ್ದಾರೆ. ಕೋರ್ಸ್‌ ಶುಲ್ಕ, ವಸತಿ, ಪ್ರಯಾಣ ಭತ್ಯೆಯನ್ನು ಸಂಸ್ಥೆಯೇ ಭರಿಸಲಿದೆ. ಪ್ರವೇಶ ಪರೀಕ್ಷೆ, ಸಂಶೋಧನಾ ಪ್ರಸ್ತಾವನೆ ಹಾಗೂ ವೃತ್ತಿಯ ಅನುಭವ ಆಧರಿಸಿ ಆಯ್ಕೆ ನಡೆಯುತ್ತದೆ.

ಸ್ಕಾಲರ್‌ಶಿಪ್‌ ವಿವರ
ಭಾಷಾ ತರಬೇತಿಯ ಅವಧಿಯ ಮೊತ್ತವಾಗಿ 750 ಯೂರೋ, ಕೋರ್ಸ್‌ ಮುಗಿಯುವವರೆಗೆ ತಿಂಗಳಿಗೆ 850 ಯೂರೋ, ಎರಡು ವರ್ಷಗಳಿಗೆ ತಲಾ 460 ಯೂರೊ ಅಧ್ಯಯನ ಭತ್ಯೆ, ಜತೆಗೆ 825 ಯೂರೊ ಪ್ರಯಾಣ ಭತ್ಯೆಯನ್ನು ಸಂಸ್ಥೆ ನೀಡುತ್ತದೆ. ಕ್ಷೇತ್ರ ಅಧ್ಯಯನದ ಭಾಗವಾಗಿ ವಿವಿಧ ದೇಶಗಳಿಗೆ ತೆರಳುವ ಅವಕಾಶವೂ ಇರಲಿದೆ. ಈ ಹಿನ್ನೆಲೆಯಲ್ಲಿ ಬೆಲ್ಜಿಯಂಗೆ ಭೇಟಿ ನೀಡಿದ್ದು, ಮುಂದಿನ ತಿಂಗಳು ಇಟೆಲಿಗೆ ತೆರಳುವರು. ಭೂಮಿ ನಿರ್ವಹಣೆ, ಆಯಾ ಭೌಗೋಳಿಕ ವಾತಾವರಣಕ್ಕೆ ಏನು ಬೆಳೆಯಬಹುದು, ಯಾವ ರೀತಿ ರೋಗ ನಿಯಂತ್ರಣ ಮಾಡಬಹುದೆಂದು ಅಧ್ಯಯನ ನಡೆಸುವರು.

ಅಪೂರ್ವ ಅವಕಾಶ
ಇದು ಅಪೂರ್ವ ಅವಕಾಶ. ಇಲ್ಲಿ ಕೃಷಿ ತಂತ್ರಜ್ಞಾನದ ಕುರಿತು ಕಲಿಯಲು ಸಾಕಷ್ಟಿದೆ. ಸಾವಯವ ಕೀಟನಾಶಕ, ನೀರು ಹಾಗೂ ಭೂಮಿಯ ನಿರ್ವಹಣೆ ಇತ್ಯಾದಿಯಿಂದ ನಮಗೂ ಅನುಕೂಲವಾಗಲಿದೆ. ಹೀಗಾಗಿ ನಮ್ಮ ಕೃಷಿ ವಿಜ್ಞಾನಿಗಳೂ ಇಲ್ಲಿನ ಕೃಷಿಯನ್ನು ಅಧ್ಯಯನ ಮಾಡಬೇಕು.

*ಕಿರಣ್‌ ಸರಪಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next