ಚಿತ್ರದುರ್ಗ: ಶಿವಮೊಗ್ಗ ಜಿಲ್ಲೆಯಲ್ಲಿರುವ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನಕ್ಕೆ ಯಾವುದೇ ಉತ್ತರಾಧಿ ಕಾರಿಯನ್ನು ನೇಮಕ ಮಾಡಿಲ್ಲ, ಯಾರಿಗೂ ಅ ಧಿಕಾರ ನೀಡಿಲ್ಲ. ಈ ಕುರಿತು ಹರಿದಾಡುತ್ತಿರುವ ವದಂತಿಗಳಿಗೆ ಭಕ್ತರು ಗಮನ ಕೊಡಬಾರದು ಎಂದು ಶಿವಮೊಗ್ಗದ ಕೂಡಲಿ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸ್ಪಷ್ಟನೆ ನೀಡಿದರು.
ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಕೂಡಲಿ ಶೃಂಗೇರಿ ಮಠದಲ್ಲಿ ಮೊಕ್ಕಾಂ ಹೂಡಿರುವ ಶ್ರೀಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನಕ್ಕೆ ಸೇರಿದ ಆಸ್ತಿಯನ್ನು ಕಬಳಿಸಲು ಗುಂಪೊಂದು ಹುನ್ನಾರ ನಡೆಸಿದೆ ಎಂದು ಪೀಠಾ ಧಿಪತಿ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಆರೋಪಿಸಿದರು.
ಈಚೆಗೆ ಮಠದೊಳಗೆ ಏಕಾಏಕಿ ನುಗ್ಗಿದ ಗುಂಪೊಂದು ಶಿಷ್ಯರ ಮೇಲೆ ಹಲ್ಲೆ ಮಾಡಿದೆ. ಈ ಕುರಿತು ಪ್ರಕರಣ ದಾಖಲಿಸಿದ್ದೇವೆ. ಅದೇ ಊರಿನವರೇ ಇದರಲ್ಲಿ ಭಾಗಿಯಾಗಿದ್ದಾರೆ ಆರೋಪಿಸಿದರು. ದಶಕಗಳ ಹಿಂದೆ ಕೆಲವರು ಮಠದ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಶಿವಮೊಗ್ಗ ಸೇರಿ ರಾಜ್ಯದ ಕೆಲವೆಡೆ ವ್ಯಾಜ್ಯ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಸಂಸ್ಥಾನದ ಆಸ್ತಿ ಇನ್ನೊಬ್ಬರ ಸ್ವತ್ತಾಗಲು ಬಿಡುವುದಿಲ್ಲ. ಸಮಿತಿ ರಚನೆಗೂ ಅವಕಾಶ ನೀಡುವುದಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದರು.
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿ ದೇಶದ ಯಾವುದೇ ರಾಜ್ಯದಲ್ಲಿ ಮಠಕ್ಕಾಗಲಿ, ಸಂಸ್ಥಾನಕ್ಕಾಗಲಿ ಸಮಿತಿ ರಚಿಸಿಲ್ಲ. ಕೂಡಲಿ ಸಂಸ್ಥಾನದ ಸಮಿತಿ ವಿಚಾರ ಹೈಕೋರ್ಟ್‌ನಲ್ಲಿ ಇತ್ಯರ್ಥವಾಗಿದೆ. ದಾವೆ ಹೂಡಿದ ಮಠದ ಭಕ್ತರೊಬ್ಬರು ಈಗ ಸಮಿತಿ ಬೇಕು ಎನ್ನುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮಠಕ್ಕೆ ಬೇರೆಯವರು ಸ್ವಾಮೀಜಿ ಆಗುತ್ತಾರೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಬಿಡಲಾಗಿದೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಈಗಲೂ ನಾನೇ ಸ್ವಾಮೀಜಿಯಾಗಿ ಮುಂದುವರಿದಿದ್ದೇನೆ. ಎಲ್ಲ ವ್ಯವಹಾರ ನೋಡಿಕೊಳ್ಳುತ್ತ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ಯಾರು ಅರ್ಹರು ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಿ, ಶಾಸ್ತ್ರೋಕ್ತವಾಗಿ ಪೀಠಾಧಿಪತಿಯನ್ನು ಆಯ್ಕೆ ಮಾಡಲಾಗುವುದು ಎಂದರು. ಆಪ್ತ ಕಾರ್ಯದರ್ಶಿ ಕೇಶವ ಪ್ರಸಾದ್ ಇದ್ದರು.