Advertisement
ರಾಜ್ಯದಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಆಟೋ ಮತ್ತು ಕ್ಯಾಬ್ ಚಾಲಕರಿದ್ದಾರೆ. ಆದರೆ ಇದುವರೆಗೆ ವಿದ್ಯಾನಿಧಿ ಯೋಜನೆ ಅಡಿ ತಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಶೇ. 1ಕ್ಕಿಂತ ಕಡಿಮೆ, ಅಂದರೆ ಕೇವಲ 200 ಮಂದಿ. ತಿಂಗಳಾದರೂ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಗದಿದ್ದರಿಂದ ಸ್ವತಃ ಸಾರಿಗೆ ಇಲಾಖೆ ಅಧಿಕಾರಿಗಳು ಅರ್ಹ ಫಲಾನುಭವಿಗಳ ಹುಡುಕಾಟ ನಡೆಸಿದ್ದಾರೆ.
Related Articles
Advertisement
ಸಾರಿಗೆ ಇಲಾಖೆಯ “ಸಾರಥಿ’ ತಂತ್ರಾಂಶದಲ್ಲಿ ಚಾಲಕರ ಅನುಜ್ಞಾಪತ್ರ (ಲೈಸೆನ್ಸ್) ಇರುತ್ತದೆ. ಅದರಲ್ಲಿ ಆಯಾ ಚಾಲಕರ ಆಧಾರ್ ಸಂಖ್ಯೆಯೂ ಲಭ್ಯವಿರುತ್ತದೆ. ಆ ಸಂಖ್ಯೆಯನ್ನು ಇ-ಆಡಳಿತ ಇಲಾಖೆ ನಿರ್ವಹಿಸುತ್ತಿರುವ “ಕುಟುಂಬ’ ತಂತ್ರಾಂಶದಲ್ಲಿ ಹಾಕಿದರೆ, ಇಡೀ ಕುಟುಂಬದ ಸದಸ್ಯರ ಪಟ್ಟಿ ಸಿಗುತ್ತದೆ. ಅದರಲ್ಲಿ ಆಟೋ ಅಥವಾ ಕ್ಯಾಬ್ ಚಾಲಕರ ಮಕ್ಕಳ ಎಲ್ಲ ಮಾಹಿತಿ ಇರುತ್ತದೆ. ಅದರ ನೆರವಿನಿಂದ ಫಲಾನುಭವಿಗಳನ್ನು ಸಂಪರ್ಕಿಸಲಾಗುತ್ತದೆ. ಇದೇ ಡಿಸೆಂಬರ್ ಅಂತ್ಯಕ್ಕೆ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ, ಜನವರಿ ವೇಳೆಗೆ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಶಿಷ್ಯವೇತನ ಜಮೆ ಮಾಡಲು ಉದ್ದೇಶಿಸಲಾಗಿದೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಏನಿದು ಯೋಜನೆ?:
ರೈತರ ಮಕ್ಕಳಿಗೆ ನೀಡುವ ಮಾದರಿಯಲ್ಲೇ 2022-23ನೇ ಸಾಲಿನ ಬಜೆಟ್‌ನಲ್ಲಿ ಟ್ಯಾಕ್ಸಿ ಮತ್ತು ಆಟೋ ಚಾಲಕರ ಮಕ್ಕಳ ಮೆಟ್ರಿಕ್ ಅನಂತರದ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸಲು “ವಿದ್ಯಾನಿಧಿ’ ಯೋಜನೆ ಘೋಷಿಸಲಾಯಿತು. ಈ ಸಂಬಂಧ ತಿಂಗಳ ಹಿಂದಷ್ಟೇ (ನ. 8) ಅರ್ಜಿಯನ್ನೂ ಆಹ್ವಾನಿಸಲಾಯಿತು.
ಯೋಜನೆಯಡಿ ಎಸೆಸೆಲ್ಸಿ ಅಥವಾ 10ನೇ ತರಗತಿ ಪೂರ್ಣಗೊಳಿಸಿದ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು/ ವಿವಿಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳ ವರೆಗೆ ಪ್ರವೇಶ ಪಡೆದ ಪ್ರತೀ ಆಟೋ ಅಥವಾ ಕ್ಯಾಬ್ ಚಾಲಕರ ಒಬ್ಬ ಮಗ ಅಥವಾ ಮಗಳಿಗೆ ಶಿಷ್ಯವೇತನ ನೀಡಲಾಗುತ್ತದೆ.
ಪ್ರಸ್ತುತ ಗ್ರಾಮ- ಒನ್, ಕರ್ನಾಟಕ- ಒನ್, ಬೆಂಗಳೂರು- ಒನ್ ಕೇಂದ್ರಗಳಲ್ಲಿ ಆಟೋ ಅಥವಾ ಕ್ಯಾಬ್ ಚಾಲಕರು ಚಾಲನಾ ಅನುಜ್ಞಾಪತ್ರ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ವಿದ್ಯಾರ್ಥಿಯ ಆಧಾರ್ ಸಂಖ್ಯೆ ನೀಡಿ, ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್ ಮೂಲಕ ಸೇವಾಸಿಂಧು (ವೆಬ್‌ಸೈಟ್:https://sevasindhu.karnataka.gov.in/Sevasindhu/Kannada ) ಮೂಲಕ ಅರ್ಜಿ ಸಲ್ಲಿಸಬಹುದು.
ಯಾರಿಗೆ ಎಷ್ಟು?:
ಪಿಯುಸಿ/ ಐಟಿಐ/ ಡಿಪ್ಲೊಮಾ
ಬಾಲಕ/ಬಾಲಕಿ
2,500 ರೂ. 3,000
ಪದವಿ
5,000 ರೂ. 5,500 ರೂ.
ವೃತ್ತಿಪರ ಕೋರ್ಸ್
7,500 ರೂ. 8,000 ರೂ.
ಎಲ್ಲ ಸ್ನಾತಕೋತ್ತರ ಕೋರ್ಸ್
10,000 ರೂ. 11,000 ರೂ.
ಉಳಿದ ಫಲಾನುಭವಿಗಳ ಆಯ್ಕೆಗೂ ಇದೇ ಮಾದರಿ?:
ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ ನಿರೀಕ್ಷೆ ಮೀರಿ ಸ್ಪಂದನೆ ದೊರಕಿದ ಹಿನ್ನೆಲೆಯಲ್ಲಿ ಯೋಜನೆಯನ್ನು ನೇಕಾರರು, ಕೂಲಿಕಾರ್ಮಿಕರು, ಮೀನುಗಾರರು, ಆಟೋ ಮತ್ತು ಕ್ಯಾಬ್ ಮಕ್ಕಳಿಗೂ ವಿಸ್ತರಿಸಲಾಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಟೇಲರ್ ಮಕ್ಕಳನ್ನೂ ಇದರ ವ್ಯಾಪ್ತಿಗೆ ತರಲಾಗುತ್ತಿದೆ. ಇದರ ಬೆನ್ನಲ್ಲೇ ಫಲಾನುಭವಿಗಳ ಬಾಗಿಲಿಗೇ ಯೋಜನೆ ತಲುಪಿಸುವ ಚಿಂತನೆ ನಡೆದಿದೆ.
ಇದಕ್ಕಾಗಿ ಯೋಜನೆ ವ್ಯಾಪ್ತಿಗೆ ಬರುವ ಫಲಾನುಭವಿಗಳ ದತ್ತಾಂಶ ಸಂಗ್ರಹ ಕಾರ್ಯ ನಡೆದಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಆಟೋ ಮತ್ತು ಕ್ಯಾಬ್ ಚಾಲಕರ ಮಕ್ಕಳಂತೆಯೇ ಉಳಿದ ಕ್ಷೇತ್ರಗಳ ಯೋಜನೆ ಫಲಾನುಭವಿಗಳಿಗೂ ಇದೇ ಮಾದರಿ ಅನುಸರಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
– ವಿಜಯಕುಮಾರ ಚಂದರಗಿ