Advertisement

ಎಲ್ಲ ನ್ಯೂನತೆ ಸರಿಪಡಿಸಿ ವಿದ್ಯಾಗಮ ಪುನರಾರಂಭ

11:53 PM Oct 12, 2020 | mahesh |

ಬೆಂಗಳೂರು: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ವಿದ್ಯಾಗಮ ಕಾರ್ಯಕ್ರಮದ ಬಗ್ಗೆ “ಉದಯವಾಣಿ’ ಓದುಗ ಶಿಕ್ಷಕರು ಮುಂದಿಟ್ಟಿರುವ ಹಲವು ಪ್ರಶ್ನೆಗಳಿಗೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಉತ್ತರಿಸಿ ದ್ದಾರೆ. ವಿದ್ಯಾಗಮ ಕಾರ್ಯಕ್ರಮದ ಪುನರುತ್ಥಾನದ ಬಗ್ಗೆ ಒಲವು ವ್ಯಕ್ತಪಡಿಸಿರುವ ಸಚಿವರು, ಜಿಲ್ಲಾವಾರು ಮಾಹಿತಿ ಸಂಗ್ರಹಿಸಿ ನ್ಯೂನತೆ ಸರಿಪಡಿಸುವುದಾಗಿ ಹೇಳಿದ್ದಾರೆ.

Advertisement

ಮಕ್ಕಳು ಮನೆಯಲ್ಲೇ ಇದ್ದರೆ ಶೈಕ್ಷಣಿಕ ಅಂತರವನ್ನು ಭರ್ತಿ ಮಾಡುವುದು ಹೇಗೆ?
– ಎ. ಪವಿತ್ರಾ, ದಕ್ಷಿಣ ಕನ್ನಡ
ಸಚಿವರು: ಉಚ್ಚ ನ್ಯಾಯಾಲಯ ಯಾವುದೇ ಮಾದರಿಯ ಶಿಕ್ಷಣವನ್ನು ಪಡೆಯುವುದು ಮಕ್ಕಳ ಹಕ್ಕೆಂದು ತೀರ್ಪು ನೀಡಿದ ಬಳಿಕ ಆನ್‌ಲೈನ್‌ ಶಿಕ್ಷಣದ ಮೇಲೆ ನಾವು ಹೇರಿದ್ದ ನಿಷೇಧ ಹಿಂಪಡೆದೆವು. ಇದೇ ಉದ್ದೇಶದಿಂದ ಸರಕಾರಿ ಶಾಲಾ ಮಕ್ಕಳಿಗೆ ವಿದ್ಯಾಗಮವನ್ನು ರೂಪಿಸಲಾಯಿತು. ಕೆಲವು ಕಾರಣಗಳಿಗಾಗಿ ತಾತ್ಕಾಲಿಕವಾಗಿ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿದೆ.

ಮಲೆನಾಡು, ಕರಾವಳಿಯ ಕೆಲವು ಭಾಗಗಳಲ್ಲಿ ವಿದ್ಯಾಗಮ ಅನುಷ್ಠಾನ ಸ್ವಲ್ಪ ಕಷ್ಟ. ಅನ್ಯ ಕಾರ್ಯಕ್ರಮ ರೂಪಿಸಲು ಸಾಧ್ಯವೆ?
-ರವಿಕುಮಾರ್‌, ಶಿಕ್ಷಕ, ಬೆಳ್ತಂಗಡಿ
ಸಚಿವರು: ವಿದ್ಯಾಗಮವು ಸ್ಥಳೀಯ ಆವಶ್ಯಕತೆ, ಸಂಪನ್ಮೂಲಗಳನ್ನು ಬಳಸಿ ನಿರ್ವಹಿಸಲು ರೂಪಿತವಾಗಿದೆ. ಮುಂದಿನ ದಿನಗಳಲ್ಲಿ ನ್ಯೂನತೆಗಳನ್ನು ಗಮನದಲ್ಲಿರಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುತ್ತದೆ.

ಬಡ ಮಕ್ಕಳನ್ನು ಮುಂದಿನ ತರಗತಿಗೆ ಭಡ್ತಿ ನೀಡುವುದು ಹೇಗೆ? ಇದಕ್ಕೊಂದು ಮಾನದಂಡ ಬೇಡವೇ?
– ರಾಘವೇಂದ್ರ, ಶಿಕ್ಷಕ, ಮಣಿಪಾಲ
ಸಚಿವರು: ಮಕ್ಕಳಿಗೆ ಶಿಕ್ಷಣ ನೀಡಬೇಕಾದದ್ದು ಸರ ಕಾರದ ಜವಾಬ್ದಾರಿ. ಇಂದಿನ ಸಂದರ್ಭದಲ್ಲಿ ದೈನಂದಿನ ತರಗತಿಗಳನ್ನು ಪ್ರಾರಂಭಿಸಲು ಕಷ್ಟಸಾಧ್ಯ. ಈ ಕಾರಣಗಳಿಂದ ನಾವು ಪರ್ಯಾಯ ಮಾದರಿಯ ಶಿಕ್ಷಣವನ್ನು ಮುಂದುವರಿಸಬೇಕಾಗುತ್ತದೆ. ನಿರಂತರ ಕಲಿಕಾ ಮೌಲ್ಯಮಾಪನದ ಮಾನದಂಡಗಳು ಈ ಬಾರಿಯ ಪರೀಕ್ಷಾ ಪ್ರಕ್ರಿಯೆ ಫ‌ಲಿತಾಂಶಗಳನ್ನು ನಿರ್ಧರಿಸಲಿವೆ.

ವಿದ್ಯಾಗಮವನ್ನು ಎಲ್ಲ ಸುರಕ್ಷಾ ಕ್ರಮಗಳೊಂದಿಗೆ ಶಾಲಾವರಣದಲ್ಲಿ ಏಕೆ ಮುಂದುವರಿಸಬಾರದು?
-ಕೆ. ರಾಮರೆಡ್ಡಿ , ಶಿಕ್ಷಕ, ಸವದತ್ತಿ
ಸಚಿವರು: ಹೆಚ್ಚಿನ ಸುರಕ್ಷಾ ಕ್ರಮಗಳೊಂದಿಗೆ ವಿದ್ಯಾಗಮ ಮುಂದುವರಿಸಿದರೆ ಇಂತಹ ವಿಷಮ ಪರಿಸ್ಥಿತಿಯಲ್ಲಿಯೂ ಸಾಮಾಜಿಕವಾಗಿ, ಆರ್ಥಿಕವಾಗಿ ದುರ್ಬಲರಾದ ಮಕ್ಕಳಿಗೆ ಶಿಕ್ಷಣ ನೀಡುವ ಸರಕಾರದ ಜವಾಬ್ದಾರಿಯನ್ನು ಸಮರ್ಥವಾಗಿ ನೆರವೇರಿಸಿದ ಹಾಗಾಗುತ್ತದೆ.

Advertisement

ಬಡ, ಆರ್ಥಿಕವಾಗಿ ಹಿಂದುಳಿದ ಮಕ್ಕಳ ಅನುಕೂಲಕ್ಕೆ ಇರುವ ವಿದ್ಯಾಗಮವನ್ನು ಶಾಲೆಯÇÉೇ ಪಾಳಿ ಪದ್ಧತಿಯಲ್ಲಿ ಏಕೆ ಮಾಡಬಾರದು?
– ಹೆಸರು ಹೇಳಲು ಇಚ್ಛಿಸದ ಶಿಕ್ಷಕ
ಸಚಿವರು: ಎಲ್ಲ ಸಾಧ್ಯತೆಗಳ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ಒಟ್ಟಿನಲ್ಲಿ ನಮ್ಮ ಗುರಿ ಸಾಮಾಜಿಕವಾಗಿ, ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳ ಹಿತ ಕಾಯುವುದಾಗಿದೆ.

ವಿದ್ಯಾಗಮ ಬೇರೆ ರಾಜ್ಯಕ್ಕೂ ಮಾದರಿ ಯಾಗಿದೆ. ನಮ್ಮ ಸರಕಾರಿ ಶಾಲಾ ಮಕ್ಕಳ ಕಲಿಕೆಯ ಆಶಾಕಿರಣವಿದು. ಯಾರೋ ಕೆಲವರಿಗೆ ಕೊರೊನಾ ಬಂದ ಮಾತ್ರಕ್ಕೆ ಯೋಜನೆ ಸ್ಥಗಿತಗೊಳಿಸಿರುವುದು ಸರಿಯೇ?
– ಅಮ್ಜದ್‌ ಖಾನ್‌, ಸಹ ಶಿಕ್ಷಕ, ದೊಡ್ಡಬಳ್ಳಾಪುರ
ಸಚಿವರು: ವಿದ್ಯಾಗಮ ಕಾರ್ಯಕ್ರಮದಲ್ಲಿ ಕಲಿಯುತ್ತಿರುವ 48 ಲಕ್ಷ ಮಕ್ಕಳದು ಸರಕಾರದ ಜವಾಬ್ದಾರಿ. ಯಾವುದೇ ಮಗುವಿಗೂ ತೊಂದರೆಯಾಗದ ರೀತಿಯಲ್ಲಿ ನಾವು ಈ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಅದಕ್ಕಾಗಿಯೇ ಯಾವುದಾದರೂ ವಿದ್ಯಾರ್ಥಿಗೆ ವಿದ್ಯಾಗಮದ ಕಾರಣ ಕೊರೊನಾ ಸೋಂಕು ತಗಲಿದೆಯೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಅದರ ಆಧಾರದಲ್ಲಿ ನಮ್ಮ ಮುಂದಿನ ನಿರ್ಣಯ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next