ಅಥಣಿ: ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ವಿದ್ಯಾಗಮ ಯೋಜನೆಗೆ ಸಾಕಷ್ಟು ಸವಾಲುಗಳಿದ್ದರೂ, ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಮುಂದುವರಿದಿದೆ. 1ರಿಂದ 10ನೇ ತರಗತಿವರೆಗೆ ಸರ್ಕಾರಿ, ಅನುದಾನಿತ ಸೇರಿ 524 ಕ್ಕೂ ಅಧಿಕ ಶಾಲೆಗಳಿವೆ. 1350 ಕ್ಕೂ ಹೆಚ್ಚು ಶಿಕ್ಷಕರು ಹಲವು ಸಾವಿರ ಮಕ್ಕಳಿಗೆ ವಿದ್ಯಾಗಮ ಯೋಜನೆಯಲ್ಲಿ ಕಲಿಸುತ್ತಿದ್ದಾರೆ.
ಮಳೆ ಬಂದಾಗ ರಸ್ತೆ ಅವ್ಯವಸ್ಥೆ, ಸಮುದಾಯ ಭವನ – ದೇವಸ್ಥಾನಗಳಲ್ಲಿನ ಸೀಮಿತ ಸೌಲಭ್ಯಗಳಲ್ಲಿಯೇ ಏಳೆಂಟು ಮಕ್ಕಳನ್ನು ಒಟ್ಟಾಗಿ ಸೇರಿಸಿ ಕಲಿಸಲಾಗುತ್ತಿದೆ. ಈ ಕಾರ್ಯಕ್ಕೆ ಗ್ರಾಮಗಳ ಮುಖಂಡರು, ಪೋಷಕರು ಸಹ ಬೆಂಬಲವಾಗಿ ನಿಂತಿದ್ದಾರೆ ಎನ್ನುತ್ತಾರೆ ಶಿಕ್ಷಕರು.
ತರಗತಿಗಳಲ್ಲಿ ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯ ಅರಿಯುವುದು ಕಷ್ಟವಿತ್ತು. ಈಗ ಪ್ರತಿ ಊರಿಗೆ ತೆರಳುತ್ತಿರುವುದರಿಂದ ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕಲಿಕಾಂಶಗಳನ್ನು ಹೇಳಿಕೊಡುವುದು ಶಿಕ್ಷಣದ ಮಟ್ಟ ಸುಧಾರಿಸಲು ಅನುಕೂಲವಾಗಿದೆ ಎನ್ನುತ್ತಾರೆ ಶಿಕ್ಷಕ ಬಿ ಬಿ ನಂದಗಾಂವಿ, ಎನ್ ಕೆ ಅವಟಿ.
ಹಾಲಳ್ಳಿ ಜಿಲ್ಲೆಯ ಕೊನೆಯ ಗ್ರಾಮವಾಗಿದ್ದು, ತೋಟದ ವಸ್ತಿಗಳಿಗೆ ತೆರಳಿ ಶಿಕ್ಷಣವನ್ನು ನೀಡುತ್ತಿದ್ದೆವೆ, ಹೈಸ್ಕೂಲ್ ವಿಭಾಗಕ್ಕೆ 150 ಕ್ಕೂ ಅಧಿಕ ಮಕ್ಕಳಿದ್ದಾರೆ. ಲಾಕ್ ಡೌನ್ ಸಮಯದಲ್ಲೂ ಮಕ್ಕಳ್ಳೋಂದಿಗೆ ಪೋನ್ ಮೂಲಕ ಸಂಪರ್ಕ ಇಟ್ಟುಕೊಂಡು ಶಿಕ್ಷಣದ ಉತ್ಸಾಹ ಕಡಿಮೆಯಾಗದಂತೆ ನೋಡಿಕೊಂಡಿದ್ದೇವೆ ಎನ್ನುತ್ತಾರೆ ಗಣಿತ ಶಿಕ್ಷಕ ಪಿ.ಆರ್.ಇಂಗಳಗಾವಿ.
– ಸಂತೋಷ ರಾ. ಬಡಕಂಬಿ