ಮಂಡ್ಯ: ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕಾ ಗುಣಮಟ್ಟ ಹೆಚ್ಚಳಕ್ಕಾಗಿ ವಿದ್ಯಾಗಮ ಕಾರ್ಯಕ್ರಮ ಮೂಲಕ ಶಿಕ್ಷಣ ನೀಡಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಘುನಂದನ್ ತಿಳಿಸಿದರು.
ತಾಲೂಕಿನ ಬೇವಿನಹಳ್ಳಿ ಗ್ರಾಮದ ಸರ್ಕಾರಿ ಶಾಲಾವರಣದಲ್ಲಿ ಮಾನವ ಹಕ್ಕುಗಳ ಸಮಿತಿ ಆಯೋಜಿಸಿದ್ದ “ಸರ್ಕಾರಿ ಶಾಲೆ ಉಳಿಸಿ-ಖಾಸಗಿ ಶಾಲೆ ವ್ಯಾಮೋಹ ಅಳಿಸಿ’ ಘೋಷ ವಾಕ್ಯದೊಂದಿಗೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉತ್ತಮ ಪ್ರತಿಕ್ರಿಯೆ: ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ 2020-21ನೇ ಶೈಕ್ಷಣಿಕ ಸಾಲಿನ ತರಗತಿಗಳು ಆರಂಭವಾಗಿಲ್ಲ. ಮಕ್ಕಳಿಗೆ ನಿರಂತರ ಕಲಿಕೆಯೂ ಲಭ್ಯವಾಗುತ್ತಿಲ್ಲ. ಶಾಲೆಗಳು ಆರಂಭ ವಾಗುವವರೆಗೂ ಮಕ್ಕಳನ್ನು ನಿರಂತರ ಕಲಿಕೆಗೆ ಹಚ್ಚುವ ಸಲುವಾಗಿ ಶಿಕ್ಷಣ ಇಲಾಖೆ ಪರ್ಯಾಯ ಮಾರ್ಗವಾಗಿ ವಿದ್ಯಾಗಮ ಕಾರ್ಯಕ್ರಮ ಜಾರಿಗೆ ತಂದಿದೆ. ಜಿಲ್ಲೆಯಲ್ಲಿಯೂ ಈ ಕಾರ್ಯ ಕ್ರಮ ಜಾರಿಯಾಗಿದ್ದು, ಪೋಷಕರು ಮತ್ತು ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು.
ಕಾನೂನಿನ ನಿಯಮ ಪಾಲಿಸಿ: ಕಾನೂನು ಅರಿವು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಎಲ್ಲ ಪೋಷಕರಿಗೆ ಮತ್ತು ನಾಗರಿಕರಿಗೂ ಅಗತ್ಯವಿದೆ. ಸಂಘ ಸಂಸ್ಥೆಗಳು ಕಾನೂನು ಅರಿವು ಕಾರ್ಯ ಕ್ರಮ ಮಾಡುತ್ತಿರುವುದು ಉಪಯುಕ್ತವಾಗಿದೆ. ಎಲ್ಲರೂ ಕಾನೂನಿನ ನಿಯಮಗಳನ್ನು ಪಾಲಿಸಬೇಕು. ಖಾಸಗಿ ಶಾಲೆ ಗಳಲ್ಲಿ ಸಿಗುವ ಇಂಗ್ಲಿಷ್ ಮಾಧ್ಯಮ ಕಲಿಕಾ ಕೌಶಲ್ಯವನ್ನು ಸರ್ಕಾರಿ ಶಾಲೆ ಗಳಲ್ಲೂ ಆರಂಭಿಸಲಾಗಿದೆ. ಪೋಷಕರು ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಸಾಧನೆ ಮಾಡಿದವರೆಲ್ಲ ಸರ್ಕಾರಿ ಶಾಲೆಗಳಲ್ಲಿ ಕಲಿತವರೇ ಆಗಿದ್ದಾರೆ ಎಂದು ಹೇಳಿದರು.
ಮನೆಗೆ ತೆರಳಿ ಪಾಠ ಬೋಧನೆ: ಮಾನವ ಹಕ್ಕುಗಳ ಸಮಿತಿ ಪ್ರಧಾನ ಕಾರ್ಯದರ್ಶಿ ನೀನಾಪಟೇಲ್ ಮಾತನಾಡಿ, ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯು ರಾಜ್ಯಕ್ಕೆ 4ನೇ ಸ್ಥಾನ ಪಡೆಯುವಲ್ಲಿ ಶ್ರಮಿಸಿದ ಎಲ್ಲ ಶಿಕ್ಷಣಾಧಿಕಾರಿಗಳಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನ ಪಡೆಯುವ ಎಲ್ಲ ಲಕ್ಷಣಗಳು ಮತ್ತು ಯೋಜನೆಗಳು ಸಫಲಗೊಳ್ಳಲಿ, ಸರ್ಕಾರಿ ಶಾಲೆ ಗಳಲ್ಲಿನ ಶಿಕ್ಷಕರು ಮೆರಿಟ್ ಮೇಲೆ ಹುದ್ದೆಗಳನ್ನು ಪಡೆದುಕೊಂಡವರಾಗಿದ್ದಾರೆ. ಉತ್ತಮ ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿನ ಶಿಕ್ಷಕರು ಮನೆ ಮನೆಗೆ ತೆರಳಿ ಪಾಠ ಗಳನ್ನು ಬೋಧಿಸುತ್ತಿದ್ದಾರೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್ ಕಾನೂನಿನ ಜಾಗೃತಿ ಮೂಡಿಸಿದರು. ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷೆ ರಜನಿರಾಜ್, ಅಧಿಕಾರಿಗಳಾದ ಶಿವಪ್ಪ, ಚಂದ್ರಕಾಂತ, ಮಹದೇವು, ಲೋಕೇಶ್, ನಾಗರಾಜು, ಮಹೇಶ್‌ಕುಮಾರ್, ರವಿ ಇದ್ದರು.