Advertisement

ವಿವಿಧೆಡೆ “ವಿದ್ಯಾಗಮ’ನಿರಂತರ ಕಲಿಕಾ ಕಾರ್ಯಕ್ರಮ

09:17 AM Aug 08, 2020 | mahesh |

ಬ್ರಹ್ಮಾವರ: ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಆಶ್ರಯದಲ್ಲಿ ವಿದ್ಯಾಗಮ ನಿರಂತರ ಕಲಿಕೆ ಕಾರ್ಯಕ್ರಮ ಅನುಷ್ಠಾನದಲ್ಲಿದೆ.
ಕೋವಿಡ್‌- 19ರ ಹಿನ್ನೆಲೆಯಲ್ಲಿ ಭೌತಿಕವಾಗಿ ಶಾಲೆ ಆರಂಭವಾಗುವವರೆಗೆ ಮಕ್ಕಳನ್ನು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿಡುವುದು, ಶಾಲೆ ಮುಚ್ಚಿರುವ
ಸಂದರ್ಭ ಮಕ್ಕಳ ನಿರಂತರ ಕಲಿಕಾ ಪ್ರಕ್ರಿಯೆ ಮುಂದುವರಿಸುವುದು, ಮಾರ್ಗದರ್ಶಿ ಶಿಕ್ಷಕರ ಮೂಲಕ ಮಕ್ಕಳ ಮನೋಸ್ಥೆ ರ್ಯವನ್ನು ಕಾಪಾಡುವ ಧ್ಯೇಯೋದ್ದೇಶಗಳೊಂದಿಗೆ ಸರಕಾರ ಜಾರಿಗೆ ತಂದಿರುವ ವಿಶಿಷ್ಟ ಕಾರ್ಯಕ್ರಮವೇ ವಿದ್ಯಾಗಮ. ಆ.1ರಿಂದ ರಾಜ್ಯಾದ್ಯಂತ ಇದು ನಿರಂತರ ಜಾರಿಗೆ ಬಂದಿದ್ದು, ಬ್ರಹ್ಮಾವರ ವಲಯದಲ್ಲಿ ಕೂಡ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ನೇತೃತ್ವದಲ್ಲಿ ಮುಖ್ಯ ಶಿಕ್ಷಕರಿಗೆ ಸಂಪೂರ್ಣ ಮಾಹಿತಿ ತಲುಪಿಸಲಾಗಿದ್ದು ವಿದ್ಯಾಗಮ ಕಾರ್ಯಕ್ರಮ ಸಕಲ ಪೂರ್ವ ಸಿದ್ಧತೆಗಳೊಂದಿಗೆ ಆರಂಭಗೊಂಡಿದೆ.

Advertisement

ಈ ಕಲಿಕಾ ಪ್ರಕ್ರಿಯೆಯಲ್ಲಿ ತಾಲೂಕಿನ ಸರಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುಮಾರು 797 ಶಿಕ್ಷಕರು ಪ್ರಾಥಮಿಕ ವಿಭಾಗದ ಸುಮಾರು 11,626 ವಿದ್ಯಾರ್ಥಿಗಳಿಗೆ ಹಾಗೂ ಪ್ರೌಢ ವಿಭಾಗದ ಸುಮಾರು 6,116 ವಿದ್ಯಾರ್ಥಿಗಳಿಗೆ “ಇಂಟಲಿಜೆಂಟ್‌ ಕೋಣೆ’, “ಬ್ರಿಲಿಯೆಂಟ್‌ ಕೋಣೆ’, “ಜೀನಿಯಸ್‌ ಕೋಣೆ’ ಎನ್ನುವ ವಿದ್ಯಾರ್ಥಿಗಳು ಹೊಂದಿರುವ ಸಂಪರ್ಕ ಸಾಧನಗಳ ಆಧಾರದ ಮೇಲೆ ಮಾಡಿದ ಕಾಲ್ಪನಿಕ ಕಲಿಕಾ ಕೋಣೆಗಳ ಮೂಲಕ ವಿದ್ಯಾರ್ಥಿಗಳು ವಾಸವಿರುವ ಭೌಗೋಳಿಕ ಸ್ಥಳದ ಆಧಾರದಲ್ಲಿ ಶಾಲೆಯ ಮಾರ್ಗದರ್ಶಿ ಶಿಕ್ಷಕರ ಮುಖಾಂತರ ಕಲಿಕೆಗೆ ಅನುಕೂಲಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ ಎಂದು ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿ ಕಾರಿ ಒ.ಆರ್‌. ಪ್ರಕಾಶ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮುದ್ರಾಡಿ ನೆಲ್ಲಿಕಟ್ಟೆ ಶಾಲೆ
ಹೆಬ್ರಿ: ಕೋವಿಡ್ ಮಹಾಮಾರಿಯ ಹಿನ್ನೆಲೆಯಲ್ಲಿ ಶಾಲೆಗಳು ತೆರೆಯದೆ ಇರುವುದರಿಂದ ವಿದ್ಯಾಗಮ ಕಾರ್ಯಕ್ರಮದ ಅಂಗವಾಗಿ ಮಕ್ಕಳನ್ನು ಕಲಿಕೆಯ ಕಡೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 6-7 ಮಕ್ಕಳನ್ನು ಒಂದೆಡೆ ಸೇರಿಸಿ ಅಭ್ಯಾಸದ ಪುನರ್‌ ಮನನ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಮುದ್ರಾಡಿ ನೆಲ್ಲಿಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ಹೆಗ್ಡೆ ಹೇಳಿದರು.

ಕೋವಿಡ್ ಜಾಗೃತಿಯ ನಿಯಮವನ್ನು ಪಾಲಿಸಿಕೊಂಡು ಮಕ್ಕಳ ಆರೋಗ್ಯವನ್ನು ದೃಷ್ಟಿಯಲ್ಲಿರಿಸಿಕೊಂಡೇ ತರಗತಿ ನಿರ್ವಹಿಸಲಾಗುತ್ತಿದೆ. ನೆಲ್ಲಿಕಟ್ಟೆ ಶಾಲೆಯ ವ್ಯಾಪ್ತಿಯಲ್ಲಿ 4 ಸ್ಥಳಗಳನ್ನು ಗುರುತಿಸಿ ಮುದ್ರಾಡಿ ಸಮೀಪದ ಮಕ್ಕಳಿಗೆ ಜಯಲಕ್ಷ್ಮೀ ಅವರ ನಿವಾಸ, ಮದಗ ಪರಿಸರದವರಿಗೆ ದಿವಾಕರ ಭಂಡಾರಿ ಮನೆ, ನೆಲ್ಲಿಕಟ್ಟೆ ವಠಾರದ ಮಕ್ಕಳಿಗೆ ಜಯಂತಿ ರಾವ್‌ ಮತ್ತು ಬಚ್ಚಪ್ಪಿನ ಮಕ್ಕಳಿಗೆ ಗದ್ದುಗೆಯಲ್ಲಿ ತರಗತಿ ನಡೆಸಲಾಗುತ್ತಿದೆ. ತರಗತಿಗೆ ಹಾಜರಾಗಲು ಸಮಸ್ಯೆಯಿರುವ ಮಕ್ಕಳಿಗೆ ವಾರದಲ್ಲಿ ಎರಡು ದಿನ ಅವರ ಮನೆಗೆ ತೆರಳಿ ತರಗತಿ ಮಾಡಿ ಮಕ್ಕಳನ್ನು ನಿರಂತರ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಮಾಡಲಾಗುತ್ತಿದೆ ಎಂದರು.

ಸಹ ಶಿಕ್ಷಕರಾದ ಲತಾ ಹೆಗ್ಡೆ, ಗೌರವ ಶಿಕ್ಷಕಿಯರಾದ ಚೈತ್ರಾ, ನಂದಿನಿ ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಪೋಷ‌ಕರೂ ಕೂಡ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ರವೀಂದ್ರ ಹೆಗ್ಡೆ ತಿಳಿಸಿದ್ದಾರೆ.

Advertisement

ಮೂಡ್ಲಕಟ್ಟೆ ಸರಕಾರಿ ಹಿ.ಪ್ರಾ. ಶಾಲೆ
ಬಸ್ರೂರು: ಸದ್ಯ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯ- ಪಠ್ಯೇತರ ಚಟುವಟಿಕೆಗಳು ನಡೆಯುತ್ತಿಲ್ಲವಾದ್ದರಿಂದ ಕೆಲವು ಶಾಲೆಗಳ ಶಿಕ್ಷಕರು ಸ್ವ-ಇಚ್ಛೆಯಿಂದ ಮಕ್ಕಳ ಅನುಕೂಲಕ್ಕಾಗಿ ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಠ ಮಾಡಿ ಬರುತ್ತಿದ್ದಾರೆ. ಮೂಡ್ಲಕಟ್ಟೆ ಸರಕಾರಿ ಹಿ. ಪ್ರಾ. ಶಾಲೆಯ ಶಿಕ್ಷಕರು ಕೂಡ ಇಂತಹದ್ದೊಂದು ಕಾರ್ಯ ಮಾಡುತ್ತಿದ್ದಾರೆ.

ಇಲ್ಲಿಯ ಶಾಲಾ ಮಕ್ಕಳಿಗೆ ಮುಖ್ಯ ಶಿಕ್ಷಕ ಐವನ್‌ ಸಂತೋಷ್‌ ಸಾಲಿನ್ಸ್‌ ನೇತೃತ್ವದಲ್ಲಿ ಸಹ ಶಿಕ್ಷಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರತಿಯೊಂದು ಮನೆಗೂ ತೆರಳಿ ಪಾಠ ಹೇಳಿಕೊಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next