Advertisement

ವಿಧಾನಸೌಧ, ವಿಕಾಸಸೌಧ ಭದ್ರತೆ ಮೇಲ್ದರ್ಜೆಗೇರಿಸಲು ನಿರ್ಧಾರ

11:23 PM Nov 03, 2019 | Lakshmi GovindaRaju |

ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧ ಹಾಗೂ ಅದರ ಕೂಗಳತೆ ದೂರದಲ್ಲಿರುವ ಪ್ರಮುಖ ಆಡಳಿತ ಕೇಂದ್ರಗಳ ಭದ್ರತಾ ವ್ಯವಸ್ಥೆ ಮೇಲ್ದರ್ಜೆ ಗೇರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ರಾಜ್ಯ ಪೊಲೀಸ್‌ ಮಹಾನಿರ್ದೇ ಶಕರು ಹಾಗೂ ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಮನವಿಗೆ ಸ್ಪಂದಿಸಿರುವ ಗೃಹ ಇಲಾಖೆ, ಭದ್ರತಾ ವ್ಯವಸ್ಥೆ ಮೇಲ್ದರ್ಜೆಗೇರಿಸಲು ಆದೇಶ ಹೊರಡಿಸಿದೆ.

Advertisement

2018 ಮಾ.7ರಂದು ಲೋಕಾಯುಕ್ತ ಪಿ. ವಿಶ್ವನಾಥ್‌ ಶೆಟ್ಟಿ ಅವರ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ಗಂಭೀರ ವಾಗಿ ಹಲ್ಲೆ ನಡೆಸಿದ್ದ. ಈ ಘಟನೆ ಬಳಿಕ ಎಚ್ಚೆತ್ತುಕೊಂಡ ನಗರ ಪೊಲೀಸ್‌ ಆಯುಕ್ತರು, ವಿಧಾನಸೌಧ, ವಿಕಾಸಸೌಧ, ಶಾಸಕರ ಭವನ, ಬಹುಮಹಡಿ ಕಟ್ಟಡ, ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಮಾಹಿತಿ ಸೌಧ ಕಟ್ಟಡಗಳ ಭದ್ರತೆ ಮೇಲ್ದರ್ಜೆಗೇ ರಿಸುವ ಕುರಿತು ಅಗತ್ಯ ಕ್ರಮಕೈಗೊಳ್ಳಬೇಕು ಹಾಗೂ ಭದ್ರತಾ ಉಪಕರಣಗಳ ಅಳವಡಿಕೆಗೆ ಅನುಮತಿ ನೀಡಬೇಕೆಂದು ಮನವಿ ಮಾಡಿದ್ದರು.

ಅದರ ಬೆನ್ನಲ್ಲೇ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಮತ್ತೂಂದು ಪತ್ರ ಬರೆದು, ಸರ್ಕಾರಿ ಕಟ್ಟಡಗಳ ಭದ್ರತೆಯನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಅವಶ್ಯಕತೆಯಿರುವ ಹೊಸ ಎಕ್ಸ್‌-ರೇ ಬ್ಯಾಗೇಜ್‌ ಸ್ಕ್ಯಾನರ್‌, ಡಿಎಫ್ಎಂಡಿ (ಡೋರ್‌ ಫ್ರೆಮ್‌ ಮೆಟಲ್‌ ಡಿಟೆಕ್ಟರ್‌)ಮತ್ತು ಎಚ್‌ಎಚ್‌ಎಂಡಿ(ಹ್ಯಾಂಡ್‌ ಹೆಲ್ಡ್‌ ಮೆಟಲ್‌ ಡಿಟೆಕ್ಟರ್‌) ಭದ್ರತಾ ಉಪಕರಣಗಳ ಮುಂಜೂರಾತಿ ಹಾಗೂ ಖರೀದಿಗೆ 4.52 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಕೋರಿದ್ದರು.

ಈ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ ರಾಜ್ಯಪತ್ರ ಹೊರಡಿಸಿರುವ ಗೃಹ ಇಲಾಖೆ, ವಿಧಾನಸೌಧ ಹಾಗೂ ಅದರ ಕೂಗಳತೆ ದೂರದಲ್ಲಿರುವ ಎಲ್ಲ ಸರ್ಕಾರಿ ಕಟ್ಟಡಗಳ ಭದ್ರತೆಯನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಿದ್ದು, ಅದಕ್ಕೆ ಅಗತ್ಯವಿರುವ ಹೊಸ ಮಾದರಿಯ 18 ಬ್ಯಾಗೇಜ್‌ ಸ್ಕ್ಯಾನರ್‌, 21 ಡಿಎಫ್ಎಂಡಿ, 44 ಎಚ್‌ಎಚ್‌ಎಂಡಿ ಉಪಕರಣಗಳನ್ನು ಖರೀದಿಸಲು ಕೋರಿದ್ದ ಶೇ.50 ಮೊತ್ತ(2.26.35.040 ರೂ.)ವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಇದರೊಂದಿಗೆ ಟೆಂಡರ್‌ ಪ್ರಕ್ರಿಯೆ ನಡೆಸುವಾಗ ಕೆಲವೊಂದು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆಯೂ ಸೂಚಿಸಿದೆ. ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕು, 25 ಲಕ್ಷ ರೂ. ಮೀರಿದ ಉಪಕರಣ ಖರೀದಿ ವೇಳೆ ಉಪಕರಣದ ಗುಣಮಟ್ಟದ ಬಗ್ಗೆ ಥರ್ಡ್‌ ಪಾರ್ಟಿ ಇನ್‌ಸ್ಪೆಕ್ಷನ್‌ ಕೈಗೊಳ್ಳಬೇಕು. ಹಾಗೆಯೇ ಗಣಕ ಯಂತ್ರ, ಪರಿಕರ ಹಾಗೂ ತಂತ್ರಾಂಶಗಳ ಖರೀದಿಗೆ ತಾಂತ್ರಿಕ ಸಲಹಾ ಸಮಿತಿ ಅನುಮೋದನೆ ಪಡೆಯಬೇಕು ಎಂದು ಆದೇಶದಲ್ಲಿ ಉಲ್ಲೇಖೀಸಿದೆ.

Advertisement

ಸಿಬ್ಬಂದಿ ಕೂಡ ನಿಯೋಜನೆ: ಈ ಕುರಿತು “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌, ಐತಿಹಾಸಿಕ ಕಟ್ಟಡಗಳ ಭದ್ರತಾ ವ್ಯವಸ್ಥೆಯನ್ನು ಸರ್ಕಾರ ಮೇಲ್ದರ್ಜೆಗೇರಿಸಿರುವುದು ಒಳ್ಳೆಯ ಬೆಳವಣಿಗೆ. ಸರ್ಕಾರದ ಆದೇಶದನ್ವಯ ಬ್ಯಾಗೇಜ್‌ ಸ್ಕ್ಯಾನರ್‌ ಹಾಗೂ ಇತರೆ ಉಪಕರಣಗಳ ಅಳವಡಿಕೆ ಮಾತ್ರವಲ್ಲ, ಹಂತ-ಹಂತವಾಗಿ ಪೊಲೀಸ್‌ ಸಿಬ್ಬಂದಿ ಕೂಡ ನಿಯೋಜಿಸಲಾಗುವುದು. ಅಗತ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.

ಭದ್ರತಾ ಲೋಪದ ಪ್ರಕರಣಗಳು
* 2018 ಮಾ.7ರಂದು ಬಹುಮಹಡಿ ಕಟ್ಟಡದಲ್ಲಿರುವ ಲೋಕಾಯುಕ್ತ ಸಂಸ್ಥೆಯ ಲೋಕಾಯುಕ್ತ ನ್ಯಾ. ಪಿ.ವಿಶ್ವನಾಥ್‌ ಶೆಟ್ಟಿ ಅವರ ಮೇಲೆ ತೇಜರಾಜ್‌ ಎಂಬಾತ ಚಾಕುವಿನಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದ. ಈ ಘಟನೆ ಬಳಿಕ ಲೋಕಾಯುಕ್ತ ಸಂಸ್ಥೆಯಲ್ಲಿ ಡಿಎಫ್ಎಂಡಿ ಅಳವಡಿಸಿದ್ದು, ಇಬ್ಬರು ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಅಲ್ಲದೆ, ಸಿಸಿ ಕ್ಯಾಮೆರಾ ಹಾಗೂ ಸಂದರ್ಶಕರ ನೋಂದಣಿ ಪುಸ್ತಕ ಇಡಲಾಗಿತ್ತು.

* 2019 ಜನವರಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಾಜಿ ಸಚಿವ ಸಿ.ಪುಟ್ಟರಂಗ ಶೆಟ್ಟಿ ಅವರ ಕಚೇರಿಯಲ್ಲಿ ಬೆರಳಚ್ಚು ಕೆಲಸ ಮಾಡುತ್ತಿದ್ದ ಮೋಹನ್‌ ಎಂಬಾತ ದಾಖಲೆ ಇಲ್ಲದ 25.76 ಲಕ್ಷ ರೂ. ಕೊಂಡೊಯ್ಯುವಾಗ ಸಿಕ್ಕಿ ಬಿದ್ದಿದ್ದ.

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಭದ್ರತೆಯಲ್ಲಿ ಯಾವುದೇ ಲೋಪದೋಷಗಳು ಆಗದಂತೆ ಎಚ್ಚರವಹಿಸಲಾಗುವುದು. ಜತೆಗೆ ಭದ್ರತೆ ಬಗ್ಗೆ ನೀಲನಕ್ಷೆ ಸಿದ್ಧಪಡಿಸಿ ಕ್ರಮಕೈಗೊಳ್ಳಲಾಗುವುದು.
-ಭಾಸ್ಕರ್‌ರಾವ್‌, ನಗರ ಪೊಲೀಸ್‌ ಆಯುಕ್ತ

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next