Advertisement
ಇದರ ಬೆನ್ನಲ್ಲೇ ಬರ ನಿರ್ವಹಣೆಯಲ್ಲಿ ವೈಫಲ್ಯ, ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ, ಅಕ್ರಮ ಮರಳು ಸಾಗಣೆ ಪ್ರಕರಣದಲ್ಲಿ ಲಕ್ಷ್ಮೇಶ್ವರ ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವು ಮುಂತಾದ ಪ್ರಕರಣಗಳನ್ನು ಪ್ರಸ್ತಾಪಿಸಿ ಸದನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳೂ ಸಜ್ಜಾಗುತ್ತಿವೆ.
Related Articles
Advertisement
ಜೆಡಿಎಸ್ ಸಜ್ಜುಜೆಡಿಎಸ್ ಸಹ ವಿಧಾನಮಂಡಲ ಅಧಿವೇಶನದಲ್ಲಿ ಬರ ಪರಿಹಾರ ವೈಫಲ್ಯ ಕುರಿತು ಉಭಯ ಸದನಗಳಲ್ಲಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿದೆ.ಬರಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿ ಹಾಗೂ ಸರ್ಕಾರದ ನಿರ್ಲಕ್ಷ್ಯ ಕುರಿತು ಜಿಲ್ಲಾ ಮಟ್ಟದಲ್ಲಿ ತಂಡ ರಚಿಸಿ ವರದಿ ತರಿಸಿಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬರ ನಿರ್ವಹಣೆ ಹಾಗೂ ವೈಫಲ್ಯದ ಬಗ್ಗೆ ಅಂಕಿ-ಅಂಶಗಳ ಸಮೇತ ಸದನದ ಮುಂದಿಡಲು ತೀರ್ಮಾನಿಸಿದ್ದಾರೆ. ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲೇ ಬರ ನಿರ್ವಹಣೆ ವೈಫಲ್ಯ ಹಾಗೂ ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಸಂಕಷ್ಟ, ಸಾಲಮನ್ನಾ ಬಗ್ಗೆ ಸರ್ಕಾರದ ಗಮನಕ್ಕೆ ತರಲು ನಿರ್ಧರಿಸಿದ್ದಾರೆ. ಈ ಕುರಿತು ಉಭಯ ಸದನಗಳ ಪಕ್ಷದ ಸದಸ್ಯರಿಗೂ ಸೂಚನೆ ನೀಡಲಾಗಿದೆ. ಈ ಮಧ್ಯೆ, ನೈಸ್ ಸಂಸ್ಥೆ ಹಗರಣದ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಸೂಚನೆ ನೀಡಿದ್ದಾರೆ. ನೈಸ್ ವರದಿಗೆ ಸಂಬಂಧಿಸಿದಂತೆ ಸದನ ಸಮಿತಿ ವರದಿ, ಸರ್ಕಾರದ ಮುಂದಿನ ಕ್ರಮಕ್ಕೆ ಒತ್ತಾಯಿಸುವದರ ಜತೆಗೆ ಆ ಸಂಸ್ಥೆಯ ಒಪ್ಪಂದವನ್ನೇ ರದ್ದುಗೊಳಿಸಲು ಆಗ್ರಹಿಸಬೇಕು ಎಂದು ತಾಕೀತು ಮಾಡಿದ್ದಾರೆ. ಹೀಗಾಗಿ, ನೈಸ್ ವಿಚಾರವನ್ನು ಜೆಡಿಎಸ್ ಪ್ರಮುಖವಾಗಿ ಪ್ರಸ್ತಾಪಿಸಲಿದೆ. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಎಲ್ಲಾ ವಿಚಾರಗಳನ್ನು ಪ್ರಸ್ತಾಪಿಸಲು ಅವಕಾಶವಿದ್ದು ಚರ್ಚೆಗೆ ಯಾವುದೇ ಪರಿಮಿತಿ ಇರುವುದಿಲ್ಲ. ಹೀಗಾಗಿ ಕಾನೂನು ಸುವ್ಯವಸ್ಥೆ, ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವ ವಿಚಾರಗಳನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳು ನಿರ್ಧರಿಸಿವೆ. ಅಧಿವೇಶನದಲ್ಲಿ ಇಂದೇನು?
ಬೆಳಗ್ಗೆ 10.55ಕ್ಕೆ ವಿಧಾನಸೌಧಕ್ಕೆ ಆಗಮಿಸಲಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು 11 ಗಂಟೆಗೆ ಸರಿಯಾಗಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯಪಾಲರ ಭಾಷಣ ಮುಗಿದ ಬಳಿಕ ಸ್ವಲ್ಪ ಹೊತ್ತು ಕಲಾಪ ಮುಂದೂಡಿ ಮತ್ತೆ ಸೇರಲಾಗುತ್ತದೆ. ಮತ್ತೆ ಕಲಾಪ ಆರಂಭವಾದಾಗ ಕಾರ್ಯದರ್ಶಿಯವರು ವರದಿ ಮಂಡಿಸಲಿದ್ದು, ಬಳಿಕ ಸಂತಾಪ ಸೂಚನಾ ನಿರ್ಣಯ ಅಂಗೀಕರಿಸಿ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಗಿತ್ತದೆ. ರಾಜಕೀಯ ಚರ್ಚೆಗೂ ವೇದಿಕೆ
ಅದಿವೇಶನದ ಕಾಲಾವಧಿ ಕಡಿಮೆ ಇದ್ದರೂ ಪ್ರಸಕ್ತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಸದನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆಯಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರದ ಗೊಂದಲ ಸರಿಪಡಿಸಿಕೊಂಡು ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಒಂದಾಗಿರುವುದು. ಕಾಂಗ್ರೆಸ್‌ಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಾಜೀನಾಮೆ, ಜೆಡಿಎಸ್‌ನ ಅಮಾನತುಗೊಂಡ ಶಾಸಕರು ಕಾಂಗ್ರೆಸ್‌ನತ್ತ ಮುಖ ಮಾಡಿರುವುದು ಹೀಗೆ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ ಶಾಸಕರು ಪರಸ್ಪರ ಕಾಲೆಳೆದುಕೊಳ್ಳುವುದು ಖಚಿತ. ಅಧಿವೇಶನದಲ್ಲಿ ಪ್ರತಿಪಕ್ಷಗಳ “ಅಸ್ತ್ರ’
– ಬರ ಪರಿಸ್ಥಿತಿ ನಿರ್ವಹಣೆ ಮತ್ತು ಪರಿಹಾರ ಕಾಮಗಾರಿಗಳಲ್ಲಿ ಸರ್ಕಾರದ ವೈಫಲ್ಯ
-ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಆಗ್ರಹ
– ಕಾನೂನು ಸುವ್ಯವಸ್ಥೆ ಪಾಲನೆ ವೈಫಲ್ಯ
– ನೈಸ್ ಅಕ್ರಮ ಕುರಿತ ಸದನ ಸಮಿತಿ ವರದಿ ಮೇಲೆ ಮುಂದಿನ ಕ್ರಮ
– ಅಕ್ರಮ ಮರಳು ಸಾಗಣೆ ಲಕ್ಷ್ಮೇಶ್ವರದಲ್ಲಿ ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವು
– ಕಪ್ಪತಗುಡ್ಡವನ್ನು ಸಂರಕ್ಷಿತಾರಣ್ಯ ವ್ಯಾಪ್ತಿಯಿಂದ ಕೈಬಿಟ್ಟುವ ಸರ್ಕಾರದ ಕ್ರಮ