ದಾವಣಗೆರೆ : ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ, ಗೋ ಹತ್ಯಾ ನಿಷೇಧ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿ ಕೈಬಿಡುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಮಾ. 22 ರಂದು “ವಿಧಾನಸೌಧ ಚಲೋ’ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11ಕ್ಕೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ±ಸ್ರತಿಭಟನಾ ಮೆರವಣಿಗೆ ನಡೆಯಲಿದೆ. 42 ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಒಳಗೊಂಡಂತೆ 50 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ದೆಹಲಿ ರೈತ ಹೋರಾಟದ ನಾಯಕರಾದ ರಾಕೇಶ್ ಸಿಂಗ್ ಟಿಕಾಯತ್, ಡಾ| ದರ್ಶನ್ ಪಾಲ್ ಇತರರು ಪಾಲ್ಗೊಳ್ಳುವರು ಎಂದರು. ಕನಿಷ್ಟ ಬೆಂಬಲ ಬೆಲೆ ಯೋಜನೆ ಖಾತರಿಪಡಿಸುವ ಕಾನೂನಿಗೆ ಮಾನ್ಯತೆ ನೀಡಬೇಕು ಎಂದು ರೈತರು ಹೋರಾಟ ನಡೆಸುತ್ತಿದ್ದಾರೆ.
ಪ್ರಧಾನಿಯವರು ಕನಿಷ್ಟ ಬೆಂಬಲ ಯೋಜನೆ ಮುಂದೆಯೂ ಇರಲಿದೆ ಎಂದು ಹೇಳುತ್ತಿದ್ದಾರೆ. ರೈತ ಸಂಘ ಕಲಬುರುಗಿ, ಬಳ್ಳಾರಿ ಎಪಿಎಂಸಿಗಳಲ್ಲಿ ಪರಿಶೀಲನೆ ನಡೆಸಿದಾಗ ಕನಿಷ್ಟ ಬೆಂಬಲ ಬೆಲೆ ದೊರಯದೇ ಇರುವುದು ಕಂಡು ಬಂದಿದೆ. ಎರಡು ಮಾರುಕಟ್ಟೆಯಲ್ಲೇ ರೈತರಿಗೆ 300 ಕೋಟಿಯಷ್ಟು ನಷ್ಟ ಆಗಿರುವ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತರುವ ಮೂಲಕ ಬಂಡವಾಳಶಾಹಿಗಳಿಗೆ ರೈತರ ಭೂಮಿಯನ್ನು ಎಷ್ಟು ಬೇಕಾದರೂ ಕೊಂಡುಕೊಳ್ಳಲು ಮುಕ್ತ ಅವಕಾಶ ಮಾಡಿಕೊಡಲಾಗಿದೆ. ಕೆಲವೇ ವರ್ಷಗಳಲ್ಲಿ 58 ನಗರಗಳ ಅಕ್ಕ ಪಕ್ಕದ ರೈತರ ಕೃಷಿ ಜಮೀನು ಬಂಡವಾಳಶಾಹಿಗಳ ಕೈಯಲ್ಲಿ ಇರಲಿದೆ. ರೈತರು ಕೃಷಿ ಭೂಮಿ ಕಳೆದುಕೊಂಡು ಬೀದಿಗೆ ಬರುವಂತಾಗಲಿದೆ. ಕೃಷಿ ದುರ್ಬಲವಾಗಿಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಗೋ ಹತ್ಯಾ ನಿಷೇಧ ಕಾಯ್ದೆ ಜಾರಿಗೆ ತರುವ ಮೂಲಕ 13 ವರ್ಷ ಮೇಲ್ಪಟ್ಟಂತಹ ಜಾನುವಾರುಗಳನ್ನ ಮಾರಾಟ ಮಾಡುವುದನ್ನ ನಿರ್ಬಂಧಿಸಲಾಗಿದೆ.
ಸಾಕಾಣಿಕೆ ಮಾಡಲು ಆಗದ ಜಾನುವಾರುಗಳನ್ನು ಉಚಿತವಾಗಿ ಗೋಶಾಲೆಗಳಿಗೆ ಕೊಡಬೇಕಾಗುತ್ತದೆ. ಇದು ರೈತರ ಮೇಲೆ ದುಷ್ಪರಿಣಾಮ ಉಂಟು ಮಾಡಲಿದೆ. ಬೆಲೆ ನಿಗದಿಪಡಿಸಿ, ಗೋಶಾಲೆಗೆ ಜಾನುವಾರು ತೆಗೆದುಕೊಳ್ಳಬೇಕು. ಇಲ್ಲವೇ ಕಾನೂನು ರದ್ದುಪಡಿಸಬೇಕು. ಹಲವಾರು ಬೇಡಿಕೆಯೊಂದಿಗೆ ವಿಧಾನ ಸೌಧಕ್ಕೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮಾತನಾಡಿ, ತ್ಯಾವಣಿಗೆ ವಿಭಾಗದ ಬಲ್ಲೂರು, ಕೆ.ಎನ್. ಹಳ್ಳಿ ಭಾಗದಲ್ಲಿ 12 ಕಿಮೀ ಭದ್ರಾ ನಾಲಾ ಆಧುನೀಕರಣ ಮಾಡಲಾಗಿದೆ. ಆದರೆ ನಾಲೆಯಲ್ಲಿ ನೀರೇ ಇಲ್ಲ. ಮುಕ್ತೇನಹಳ್ಳಿ ಇತರೆ ಭಾಗದಲ್ಲಿ ಸರಿಯಾದ ರಸ್ತೆಯೇ ಇಲ್ಲ. ಆದರೂ ತೆರಿಗೆ ಕಟ್ಟಬೇಕಾಗುತ್ತಿದೆ.
ನಾಲೆಯಲ್ಲಿ ನೀರು ಹರಿಸದೇ ಇರುವುದು, ಸಮರ್ಪಕ ರಸ್ತೆ ಇಲ್ಲದ ಕಾರಣಕ್ಕೆ ಸರ್ಕಾರ ನಮ್ಮ ತೆರಿಗೆ ಹಣ ವಾಪಸ್ ನೀಡಬೇಕು. ಮಾ. 31ರ ಒಳಗಾಗಿ ನಾಲೆಯಲ್ಲಿ ನೀರು ಹರಿಸುವಂತಾಗಬೇಕು. ಉತ್ತಮ ರಸ್ತೆ ಮಾಡಬೇಕು. ಇಲ್ಲದಿದ್ದಲ್ಲಿ ಏ. 2 ರಂದು ಬೆಸ್ಕಾಂ, ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಕೆ.ಎಸ್. ಪ್ರಸಾದ್, ಗದಿಗೇಶ್, ಅಶೋಕಗೌಡ್ರು, ಮಂಜುನಾಥ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.