Advertisement

ಅದೃಷ್ಟದ ನೆಲದಲ್ಲಿ ಮತ್ತೆ ಅಧಿಕಾರದ ಕಸರತ್ತು

12:29 PM Nov 01, 2022 | Team Udayavani |

ದಾವಣಗೆರೆ: ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 150+ ಸ್ಥಾನ ಗೆಲ್ಲುವುದರೊಂದಿಗೆ ಮತ್ತೆ ಅಧಿಕಾರಕ್ಕೇರುವ ಗುರಿ ಹೊಂದಿರುವ ಬಿಜೆಪಿ “ರಾಜಕೀಯ ಪಕ್ಷಗಳ ಅದೃಷ್ಟದ ನೆಲ’ ಎಂದೇ ಖ್ಯಾತಿ ಹೊಂದಿರುವ ದಾವಣಗೆರೆಯಲ್ಲಿ ವಿರಾಟ್‌ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ.

Advertisement

ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ರಾಜಕೀಯ ಪಕ್ಷಗಳ ಅದೃಷ್ಟದ ಊರು ಎಂಬುದು ಬರೀ ಬಾಯಿ ಮಾತಿನಲ್ಲಿ ಹೇಳುವಂತದ್ದಲ್ಲ. ರಾಜಕೀಯ ಪಕ್ಷಗಳು ಇಲ್ಲಿ ನಡೆಸಿರುವ ಸಮಾವೇಶ ಅಧಿಕಾರವನ್ನೇ ತಂದಿತ್ತಿದೆ ಎಂಬುದಕ್ಕೆ ಹಲವಾರು ನಿದರ್ಶನಗಳಿವೆ.

2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಸ್ಥಾನ ಗಳಿಸುವ ಮೂಲಕ ಯುಪಿಎ-1 ಸರ್ಕಾರ ರಚಿಸಿದ್ದು ಇತಿಹಾಸ. ಕಾಂಗ್ರೆಸ್‌ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯ ಪ್ರಾರಂಭಿಸಿದ್ದೇ ದಾವಣಗೆರೆಯಿಂದ ಎಂಬುದು ಗಮನಾರ್ಹ. ಕಾಂಗ್ರೆಸ್‌ನ ಅಧಿ ನಾಯಕಿ ಸೋನಿಯಾ ಗಾಂಧಿ ಅವರು ಭಾರತ್‌ ನಿರ್ಮಾಣ್‌’ ಹೆಸರಿನ ಪ್ರಚಾರ ಕಾರ್ಯಕ್ಕೆ ದಾವಣಗೆರೆಯಲ್ಲೇ ಚಾಲನೆ ನೀಡಿದ್ದರು. ಕಾಂಗ್ರೆಸ್‌ ಅತ್ಯಧಿಕ ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಮರಳಿ ಪಡೆದಿತ್ತು. ದಾವಣಗೆರೆ ಕಾಂಗ್ರೆಸ್‌ ಪಾಲಿಗೆ ಅದೃಷ್ಟದ ತಾಣವಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಸಹ 2012ರಲ್ಲಿ ದಾವಣಗೆರೆಯಲ್ಲಿ ಹಾಲುಮತ ಮಹೋತ್ಸವ ನಡೆಸಿದ ಮರು ವರ್ಷದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದರು. ಕಳೆದ ಆ.3ರಂದು ದಾವಣಗೆರೆಯಲ್ಲೇ ನಡೆದ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವಕ್ಕೆ ಹರಿದು ಬಂದ ಜನಸಾಗರ ರಾಜ್ಯ ಕಾಂಗ್ರೆಸ್‌ ಪಾಲಿಗೆ ಹೊಸ ಚೈತನ್ಯವನ್ನೇ ತುಂಬಿದೆ.

ಸ್ವತಃ ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಒಳಗೊಂಡಂತೆ ಕಾಂಗ್ರೆಸ್‌ ನಾಯಕರೂ ಅಷ್ಟೊಂದು ಪ್ರಮಾಣದಲ್ಲಿ ಜನರು ಸೇರುವ ನಿರೀಕ್ಷೆಯನ್ನೂ ಮಾಡಿರಲೇ ಇಲ್ಲ. ನಿರೀಕ್ಷೆ ಮಾತ್ರವಲ್ಲ ಊಹೆಗೂ ನಿಲುಕದ ರೀತಿ ಜನರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆ ಕಾರ್ಯಕ್ರಮದ ನಂತರ ರಾಜ್ಯದಲ್ಲಿ ಕಾಂಗ್ರೆಸ್‌ ಪುಟಿದೆದ್ದಿದೆ. ಮತ್ತೆ ಅ ಧಿಕಾರಕ್ಕೆ ಬರುವ ವಿಶ್ವಾಸದೊಂದಿಗೆ ಮುನ್ನಡೆಯುತ್ತಿದೆ. ಕಾಂಗ್ರೆಸ್‌ ಅಧಿಕಾರಕ್ಕೇರುವ ಭವಿಷ್ಯದ ಕನಸು ಕಾಣಲು ಮತ್ತು ನನಸಾಗಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದು ದಾವಣಗೆರೆ.

Advertisement

ಬಿಜೆಪಿಗೂ ಅದೃಷ್ಟದ ಊರು:

ಬಿಜೆಪಿ ಪಾಲಿಗೂ ದಾವಣಗೆರೆ ಅದೃಷ್ಟದ ನೆಲ. 2008ರಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ದಾವಣಗೆರೆಯಲ್ಲೇ ರಾಜ್ಯ ಕಾರ್ಯಕಾರಣಿ ಸಭೆ ನಡೆಸಿ ಗೆಲುವಿನ ರಣತಂತ್ರ ಹೆಣೆಯಲಾಗಿತ್ತು. ಆ ಚುನಾವಣೆಯಲ್ಲಿ ಅಧಿಕ ಸ್ಥಾನ ಗಳಿಸುವ ಮೂಲಕ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆಗ ಗುಜರಾತ್‌ ಸಿಎಂ ಆಗಿದ್ದ ಪ್ರಧಾನಿ ಮೋದಿ ದಾವಣಗೆರೆಯಲ್ಲಿ ಪ್ರಚಾರ ನಡೆಸಿದ್ದರು. 2014ರ ಲೋಕಸಭಾ ಚುನಾವಣೆಗೆ ಮುನ್ನವೂ ದಾವಣ ಗೆರೆಯಲ್ಲಿ ಭಾರತ ಗೆಲ್ಲಿಸಿ’ ಕಾರ್ಯಕ್ರಮದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು.

ದಾವಣಗೆರೆಯಲ್ಲಿ ಬಿಜೆಪಿ ನಡೆಸಿದ ಅನೇಕ ಸಭೆ, ಸಮಾವೇಶಗಳು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿವೆ. ಅಂದುಕೊಂಡಿದ್ದ ಗುರಿ ಸಾಧಿಸಲು ವೇದಿಕೆಯಾಗಿವೆ. ಹಾಗಾಗಿಯೇ ಈಗ ಬಿಜೆಪಿಯ ಭದ್ರಕೋಟೆ ಆಗಿರುವ ದಾವಣಗೆರೆಯಲ್ಲಿ 8-10 ಲಕ್ಷ ಜನರ ಒಗ್ಗೂಡಿಸಿ ಶಕ್ತಿ ಪ್ರದರ್ಶನ ಮಾಡುವುದಾಗಿ ಕಲಬುರಗಿಯಲ್ಲಿ ಅ.30ರಂದು ನಡೆದ ಇತರೆ ಹಿಂದುಳಿದ ವರ್ಗಗಳ ವಿರಾಟ್‌ ಸಮಾವೇಶದಲ್ಲಿ ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಇರುವ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದ್ದಾರೆ.

ಬಿಎಸ್‌ವೈ ಲೆಕ್ಕಾಚಾರ ಏನು?

ಪಕ್ಕದ ಶಿವಮೊಗ್ಗ ಜಿಲ್ಲೆಯ ಯಡಿಯೂರಪ್ಪ ಅವರಿಗೆ ದಾವಣಗೆರೆ ಜಿಲ್ಲೆಯ ನಾಡಿಮಿಡಿತ, ಇಲ್ಲಿ ನಡೆಸುವ ಸಭೆ, ಸಮಾವೇಶ ಬೀರುವ ಯಶಸ್ವಿ ಪರಿಣಾಮದ ಬಗ್ಗೆ ಬಹಳ ಚೆನ್ನಾಗಿಯೇ ಗೊತ್ತಿದೆ. ಹಾಗಾಗಿಯೇ ದಾವಣಗೆರೆಯಲ್ಲಿ ಶಕ್ತಿ ಪ್ರದರ್ಶನದ ಅನಾವರಣದ ಮಾತುಗಳನ್ನು ವಿಶ್ವಾಸದಿಂದಲೇ ಹೇಳಿದ್ದಾರೆ. ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರ ವಿಶ್ವಾಸಕ್ಕೆ ಕಿಂಚಿತ್ತೂ ಧಕ್ಕೆ ಆಗದ ಪೂರಕ ವಾತಾವರಣವೂ ಇದೆ. ದಾವಣಗೆರೆಯ ಸಮಾವೇಶ ಅಧಿಕಾರಕ್ಕೆ ಮರಳಿ ಬರುವ ವಿಶ್ವಾಸದಲ್ಲಿರುವ ಬಿಜೆಪಿ ಪಾಲಿಗೆ ಹೊಸ ಹುರುಪು, ಚೈತನ್ಯ ನೀಡುವ ರಾಜಕೀಯ ಲೆಕ್ಕಾಚಾರ ಇದೆ.

ಜೆಡಿಎಸ್‌ಗೂ ಅಧಿಕಾರ ಕೊಟ್ಟ ನೆಲ

ಬಿಜೆಪಿ, ಕಾಂಗ್ರೆಸ್‌ ಮಾತ್ರವಲ್ಲ ಜನತಾ ಪರಿವಾರಕ್ಕೂ ದಾವಣಗೆರೆ ಪುನಃ ರಾಜಕೀಯವಾಗಿ ಅದೃಷ್ಟ ತಂದಿತ್ತಿದೆ. 1999ರಲ್ಲಿ ನಡೆದ ದಶ ದಿಕ್ಕುಗಳಿಂದ ದಾವಣಗೆರೆ ಸಮಾವೇಶ ಯಶಸ್ವಿಯಾಗಿದ್ದು ಮಾತ್ರವಲ್ಲ ಮುಂದೆ ಜನತಾ ಪರಿವಾರ ಅಧಿಕಾರಕ್ಕೂ ಬಂದಿತ್ತು.

●ರಾ.ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next