Advertisement

ಇಂದಿನಿಂದ ಅಧಿವೇಶನ: ಸುಗಮ ಕಲಾಪ ನಡೆಯಲಿ

12:38 AM Dec 07, 2020 | sudhir |

ರಾಜ್ಯ ವಿಧಾನ ಮಂಡಲದ ಅಧಿವೇಶನ ಇಂದಿನಿಂದ ಆರಂಭವಾಗುತ್ತಿದೆ. ಏಳು ದಿನ ನಡೆಯುವ ಅಧಿವೇಶನದಲ್ಲಿ ಐದು ದಿನ ಮಾತ್ರ ಪ್ರಶ್ನೋತ್ತರ ಕಲಾಪ ಸೇರಿದಂತೆ ರಾಜ್ಯದ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಿದೆ. ಕೊನೆಯ ಎರಡು ದಿನ ವಿಧಾನಸಭಾಧ್ಯಕ್ಷರು ಒಂದು ದೇಶ ಒಂದೇ ಚುನಾವಣೆ ವಿಷಯದ ಮೇಲೆ ಚರ್ಚೆಗೆ ಅವಕಾಶ ಕೊಡಲು ನಿರ್ಧರಿಸಿರುವುದರಿಂದ ಐದು ದಿನ ಮಾತ್ರ ಚರ್ಚೆಗೆ ಅವಕಾಶ ದೊರೆಯಲಿದೆ.

Advertisement

ವಿಧಾನ ಮಂಡಲದ ಅಧಿವೇಶನ ರಾಜ್ಯದ ಜ್ವಲಂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವೇದಿಕೆಯಾಗಿದ್ದು ಅದರ ಜತೆಗೆ ಪ್ರಮುಖ ಮಸೂದೆಗಳನ್ನು ಮಂಡನೆ ಮಾಡಿ ಪಾಸ್‌ ಮಾಡುವ ಜವಾಬ್ದಾರಿಯೂ ಶಾಸಕಾಂಗದ ಮೇಲಿದೆ.

ರಾಜ್ಯ ಸರಕಾರ ಅಧಿವೇಶನ ನಡೆಸುವ ವಿಷಯದಲ್ಲಿ ತಾನೇ ಮಾಡಿರುವ ನಿಯಮವನ್ನು ಪಾಲಿಸಲು ಸಾಧ್ಯವಾಗದೇ ಪ್ರತೀ ವರ್ಷವೂ ನಿಗದಿ ಪಡಿಸಿದ 60 ದಿನ ಕಲಾಪ ನಡೆಸಲಾಗದೇ ಮುಕ್ತಾಯ ಗೊಳಿಸಲಾಗುತ್ತಿದೆ. ಇರುವ ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ವಿಷಯಗಳ ಮೇಲೆ ಚರ್ಚೆ ಹಾಗೂ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕಿದೆ.

ರಾಜ್ಯ ಸರಕಾರ ಈ ಅಧಿವೇಶನದಲ್ಲಿ ಪ್ರಮುಖವಾಗಿ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ, ಲವ ಜಿಹಾದ್‌ ತಡೆಯಲು ಮತಾಂತರ ನಿಷೇಧ ಕಾಯ್ದೆಗೆ ತಡೆಯೊಡ್ಡಲು ತಿದ್ದುಪಡಿ, ಈಗಾಗಲೇ ಅಧ್ಯಾದೇಶ ಹೊರಡಿಸಿರುವ ಭೂ ಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ಮಸೂದೆಗಳ ಮಂಡನೆಗೆ ನಿರ್ಧರಿಸಿದೆ.

ವಿಪಕ್ಷ ಕಾಂಗ್ರೆಸ್‌ ಲವ್‌ ಜೆಹಾದ್‌ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ನೇರವಾಗಿಯೇ ವಿರೋಧಿಸುವ ತೀರ್ಮಾನ ಕೈಗೊಂಡಿದೆ. ಸರಕಾರ ಮತ್ತು ವಿಪಕ್ಷ ಈ ವಿಷಯದಲ್ಲಿ ಹಠಕ್ಕೆ ಬಿದ್ದು ಕಲಾಪದ ಸಮಯವನ್ನು ಅನಗತ್ಯವಾಗಿ ವ್ಯರ್ಥ ಮಾಡದೇ ಜವಾಬ್ದಾರಿಯಿಂದ ಎರಡೂ ಪಕ್ಷಗಳ ಸದಸ್ಯರು ನಡೆದುಕೊಂಡು ಸುಗಮ ಕಲಾಪ ನಡೆಸುವುದು ಎಲ್ಲರ ಕರ್ತವ್ಯವಾಗಿದೆ.

Advertisement

ರಾಜ್ಯದಲ್ಲಿ ಈ ವರ್ಷ ಕೊರೊನಾ ಲಾಕ್‌ಡೌನ್‌ ಪರಿಣಾಮ ಇನ್ನೂ ಜನರ ಜೀವನ ಸಹಜ ಸ್ಥಿತಿಗೆ ಮರಳಿಲ್ಲ. ಉದ್ಯೋಗ ಕಳೆದುಕೊಂಡವರಿಗೆ ಪರ್ಯಾಯ ಉದ್ಯೋಗ ಕಲ್ಪಿಸುವ ಹಾಗೂ ಸ್ವಂತ ಉದ್ಯೋಗ ಹಾಗೂ ಉದ್ಯಮದಲ್ಲಿ ವ್ಯವಹಾರ ವಹಿವಾಟು ನಷ್ಟ ಅನುಭವಿಸಿದವರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಚರ್ಚಿಸಿ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವ ಅಗತ್ಯವಿದೆ.

ಅಲ್ಲದೇ ಈ ವರ್ಷವೂ ರಾಜ್ಯದ 183 ತಾಲೂಕುಗಳಲ್ಲಿ ಪ್ರವಾಹ ಉಂಟಾಗಿ ಸುಮಾರು 24 ಸಾವಿರ ಕೋಟಿ ರೂ. ನಷ್ಟ ಉಂಟಾಗಿದ್ದು, ಕಳೆದ ವರ್ಷದ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಇನ್ನೂ ಪೂರ್ಣ ಪ್ರಮಾಣದ ಪರಿಹಾರ ದೊರೆತಿಲ್ಲ ಎಂಬ ಆರೋಪ ಇದೆ. ರಾಜ್ಯದ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ದೊರೆಯುತ್ತಿಲ್ಲ ಎಂಬ ಕೂಗು ರೈತ ವರ್ಗದಿಂದ ಕೇಳಿ ಬರುತ್ತಿದೆ.

ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಕಡಿಮೆ ಅವಧಿ ನಡೆಯುವ ವಿಧಾನ ಮಂಡಲದ ಅಧಿವೇಶನ ಹೆಚ್ಚು ಫ‌ಲಪ್ರದವಾಗಬೇಕಿದೆ. ಹೀಗಾಗಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳು ವಿವಾದಾತ್ಮಕ ಮಸೂದೆಗಳನ್ನು ಮುಂದಿಟ್ಟುಕೊಂಡು ಪ್ರತಿಷ್ಠೆಗೆ ಬಿದ್ದು, ಕಲಾಪ ವ್ಯರ್ಥವಾಗದಂತೆ ನೋಡಿಕೊಳ್ಳಬೇಕೆನ್ನುವುದು ಜನರ ಆಶಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next