Advertisement
ಉತ್ತರ ಕರ್ನಾಟಕದಲ್ಲಿ ಸಾಮಾನ್ಯವಾಗಿ ಜನವರಿಯಿಂದ ವಿವಿಧ ಜಿಲ್ಲೆಗಳಲ್ಲಿ ಜಾತ್ರೆ ಸಂಭ್ರಮ ಆರಂಭವಾಗುತ್ತದೆ. ಅದು ಏಪ್ರಿಲ್-ಮೇ ವರೆಗೂ ಮುಂದುವರೆಯುತ್ತದೆ. ಆದರೆ, ಇದೀಗ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ಟೋಬರ್-ನವೆಂಬರ್ ನಿಂದಲೇ ಅನೇಕ ಕಡೆಗಳಲ್ಲಿ ಮತಾಕರ್ಷಣೆ ಜಾತ್ರೆ ಶುರುವಾಗಿದೆ. ವಿಧಾನಸಭೆ ಸ್ಪರ್ಧೆಗೆ ಇಳಿಯಬೇಕೆಂಬ ಚಿಂತನೆಯ ಟಿಕೆಟ್ ಆಕಾಂಕ್ಷಿಗಳ ಜತೆಗೆ, ಹಾಲಿ ಶಾಸಕರು ಸಹ ಪೈಪೋಟಿಗೆ ಬಿದ್ದವರಂತೆ ಮತದಾರರ ಸೆಳೆಯುವ ನಿಟ್ಟಿನಲ್ಲಿ ಹಲವು ಆಮಿಷಗಳಿಗೆ ಮುಂದಾಗಿದ್ದಾರೆ.
Related Articles
Advertisement
ಇದರ ಜತೆಗೆ ಇರುವ ಪಕ್ಷದಲ್ಲಿ ತಮಗೆ ಟಿಕೆಟ್ ಅಸಾಧ್ಯ ಎನ್ನುವವರಲ್ಲಿ ಕೆಲವು ಈಗಾಗಲೇ ಇನ್ನೊಂದು ಪಕ್ಷಕ್ಕೆ ಜಿಗಿದಿದ್ದು, ಇನ್ನು ಕೆಲವರು ಇನ್ನಷ್ಟು ದಿನ ಕಾಯ್ದು ನೋಡೋಣ ಎಂಬ ಚಿಂತನೆಯಲ್ಲಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಪ್ರಮುಖ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಇನ್ನಷ್ಟು ಜೋರಾಗಲಿದೆ. ಹಾಲಿ ಶಾಸಕರಲ್ಲಿ ಕೆಲವರಿಗೆ ಟಿಕೆಟ್ ತಪ್ಪುವ ಭೀತಿ ಇದೆ ಎನ್ನಲಾಗುತ್ತಿದ್ದು, ಅವರು ಸಹ ಮುಂದಿನ ರಾಜಕೀಯ ಭವಿಷ್ಯಕ್ಕೆ ವೇದಿಕೆ ಸಜ್ಜುಗೊಳಿಸಿಕೊಳ್ಳಲು ಆರಂಭಿಸಿದ್ದಾರೆ ಎನ್ನಲಾಗಿದೆ. ಕೆಲವರು ಪಕ್ಷೇತರವಾಗಿಯಾದರೂ ಸ್ಪರ್ಧೆಗಿಳಿಯೋಣ ಎಂಬ ತಯಾರಿಯಲ್ಲಿ ತೊಡಗಿದ್ದಾರೆ.
ಸೀರೆ, ಕುಕ್ಕರ್, ಕ್ಯಾಲೆಂಡರ್: ಚುನಾವಣೆ ಪ್ರಕ್ರಿಯೆ ಆರಂಭವಾಗಿಲ್ಲ. ಆದರೆ, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಚುನಾವಣೆ ಬಂದೆ ಬಿಟ್ಟಿದೆಯೇ ಎನ್ನುವಂತೆ ಸನ್ನಿವೇಶಗಳು ಸೃಷ್ಟಿಯಾಗತೊಡಗಿದೆ. ಇದಕ್ಕೆ ಕಾರಣ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಹಾಗೂ ಮತದಾರರಿಗೆ ತೋರುವ ಆಮಿಷವಾಗಿದೆ.
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಜನ್ಮದಿನಾಚರಣೆ, ಜಾತ್ರೆ, ಉತ್ಸವದ ನೆಪದಲ್ಲಿ ಸೀರೆ, ಸ್ಟೀಲ್ ಟಿಫಿನ್ ಬಾಕ್ಸ್, ಕುಕ್ಕರ್, ಆಹಾರ ಧಾನ್ಯಗಳ ಕಿಟ್ ಇನ್ನಿತರವುಗಳನ್ನು ಹಂಚಲಾಗುತ್ತಿದೆ. 100, 200, 500 ರೂ. ಒಳಗಿನ ಈ ಸಾಮಗ್ರಿಗಳನ್ನು ಪಡೆದುಕೊಳ್ಳಲು ಜನರು ಮುಗಿಬೀಳುತ್ತಿದ್ದು, ಕೆಲವು ಕಡೆ ನೂಕುನುಗ್ಗಲು ಉಂಟಾಗಿದ್ದು ಇದೆ. ಇನ್ನು ಕೆಲವರು 2023ರ ಹೊಸ ವರ್ಷ ಆಗಮನವನ್ನು ಬಳಸಿಕೊಂಡು, ತಮ್ಮ ಭಾವಚಿತ್ರ ಇರುವ ಕ್ಯಾಲೆಂಡರ್‌ಗಳನ್ನು ಮುದ್ರಿಸಿ ಮನೆ ಮನೆಗೆ ತೆರಳಿ ಅವುಗಳನ್ನು ನೀಡುತ್ತಿದ್ದಾರೆ. ಕೆಲವರು ಸೀರೆ ಜತೆಗೆ ಮಹಿಳಾ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯಲು ಅರಿಶಿಣ-ಕುಂಕುಮ, ಬಳೆಗಳು ಇನ್ನಿತರ ಸಾಮಗ್ರಿಗಳಿರುವ ಬ್ಯಾಗ್ ವಿತರಿಸುತ್ತಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಲಾಗುತ್ತಿದ್ದು, ಟಿಕೆಟ್ ಆಕಾಂಕ್ಷಿಗಳು ಇಲ್ಲವೆ ಶಾಸಕರಾಗಿದ್ದವರು ಅದರ ವೆಚ್ಚ ನೋಡಿಕೊಳ್ಳುವ ಮೂಲಕ ಪ್ರಭಾವ ಬೀರುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಜಾತ್ರೆ, ಉತ್ಸವ, ಮದುವೆ ಇನ್ನಿತರ ಸಮಾರಂಭಗಳಿಗೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಟಿಕೆಟ್ ಆಕಾಂಕ್ಷಿಗಳು ಅಲ್ಲಿನ ವೆಚ್ಚದಲ್ಲಿ ಪಾಲು ಪಡೆದುಕೊಂಡು ಇದು ತಮ್ಮ ಸೇವೆ ಎಂದು ಬಿಂಬಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಇನ್ನು ಕೆಲವರು ಗ್ರಾಮಗಳನ್ನು ಸುತ್ತುವ ಕಾರ್ಯಕ್ಕೆ ಮುಂದಾಗಿದ್ದು, ಗ್ರಾಮದಲ್ಲಿನ ಹಿರಿಯರ ಪಾದಕ್ಕೆರುಗುವುದು, ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವುದಲ್ಲದೆ, ತಾವು ಆಯ್ಕೆಯಾದರೆ ಇದಕ್ಕೆಲ್ಲ ಪರಿಹಾರ ದೊರಕಿಸುವ ಭರವಸೆ ನೀಡುತ್ತಿದ್ದಾರೆ.
ವೇದಿಕೆಯಾದ ಸಾಮಾಜಿಕ ಜಾಲತಾಣ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದ ವಿವಿಧ ಟಿಕೆಟ್ ಆಕಾಂಕ್ಷಿಗಳು ತಮ್ಮ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚಾರ ಇನ್ನಿತರ ಮಾಹಿತಿಗಳಿಗೆ ಸಾಮಾಜಿಕ ಜಾಲತಾಣವನ್ನು ವೇದಿಕೆಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನರೊಂದಿಗೆ ಭೇಟಿ, ಸಂವಾದ, ಜಾತ್ರೆ-ಉತ್ಸವ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಭಾಗಿಯಾಗಿದ್ದನ್ನು ವೀಡಿಯೊ, ಫೋಟೋಗಳ ಸಮೇತ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಚಲನಚಿತ್ರಗಳ ಜನಪ್ರಿಯ ಹಾಡುಗಳನ್ನು ಬಳಸಿಕೊಂಡು ನಮ್ಮ ನಾಯಕ ಇವರು ಎಂಬಂತೆ ಪ್ರಚಾರದ ತಂತ್ರ ಬಳಸುತ್ತಿದ್ದಾರೆ.
ಹೆಚ್ಚಿದ ಜನರ ಆರೋಗ್ಯ ಕಾಳಜಿ!
ಆಕಾಂಕ್ಷಿಗಳು ವಿವಿಧ ಸಂಘ-ಸಂಸ್ಥೆ, ಪಕ್ಷವನ್ನು ಬಳಸಿಕೊಂಡು ಸರಣಿ ರೂಪದಲ್ಲಿ ಆರೋಗ್ಯ-ನೇತ್ರ ತಪಾಸಣೆ ಶಿಬಿರ ಆಯೋಜಿಸುವುದು, ರಕ್ತದಾನ ಶಿಬಿರ ಆಯೋಜನೆ, ಆಯುಷ್ಮಾನ್ ಕಾರ್ಡ್ ನೋಂದಣಿ ಇನ್ನಿತರ ಕಾರ್ಯ ಕೈಗೊಳ್ಳುತ್ತಿದ್ದಾರೆ. ಜನರು ತಪಾಸಣಾ ಕೇಂದ್ರಗಳಿಗೆ ಬರುವ ಬದಲು ತಪಾಸಣಾ ಕೇಂದ್ರವನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ತಪಾಸಣೆ ನಂತರ ವಿವಿಧ ಕಂಪನಿಗಳು ಪ್ರಚಾರಾರ್ಥವಾಗಿ ನೀಡುವ ಹಲವು ಔಷಧಿಗಳನ್ನು ಜನರಿಗೆ ಉಚಿತವಾಗಿ ನೀಡುವ ಮೂಲಕ ಪ್ರಭಾವ ಬೀರುವ ಯತ್ನ ತೋರುತ್ತಿದ್ದಾರೆ.