ಉಡುಪಿ: ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಮತದಾರರ ಸಂಖ್ಯೆ ಕಡಿಮೆ ಇರಬಹುದು. ಆದರೆ ನಮ್ಮಲ್ಲಿ ಆತ್ಮ ವಿಶ್ವಾಸವಿದೆ. ಅಭ್ಯರ್ಥಿಯಾದ ರಾಜು ಪೂಜಾರಿಯವರು ಸ್ಥಳೀಯಾಡಳಿತ ಸಂಸ್ಥೆಯಿಂದಲೇ ಬಂದವರಾಗಿದ್ದು, ಜಯ ಸಾಧಿಸುವರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.
ಉಭಯ ಜಿಲ್ಲೆಗಳ ನಾಯಕರ ಹಾಗೂ ಪ್ರಮುಖರ ಅಭಿಪ್ರಾಯ ಪಡೆದು ಒಮ್ಮತದ ಅಭ್ಯರ್ಥಿಯನ್ನು ಪಕ್ಷ ಆಯ್ಕೆ ಮಾಡಿದೆ. ಈಗಾಗಲೇ ಎಲ್ಲ ವಿಧಾನ ಸಭಾ ಕ್ಷೇತಗಳಲ್ಲೂ ಪ್ರಚಾರ ಪ್ರಕ್ರಿಯೆ ಆರಂಭಿಸಿದ್ದು, ಉಡುಪಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ಸಭೆ ನಡೆಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಚಾರಕ್ಕೆ ಬರುವುದಾಗಿ ತಿಳಿಸಿದ್ದಾರೆ. ಗುರುವಾರದಿಂದ ದ.ಕ. ಜಿಲ್ಲೆಯಲ್ಲಿ ವಿಧಾನಸಭಾವಾರು ಸಭೆ ನಡೆಸಲಿದ್ದೇವೆ. ಅಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರಚಾರದಲ್ಲಿ ಭಾಗವಹಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಇರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲವು ಸಾಧಿಸಿದರೆ ಕರಾವಳಿ ಅಭಿವೃದ್ಧಿಗೆ ಇನ್ನೊಂದು ಗಟ್ಟಿ ಧ್ವನಿ ಸಿಗಲಿದೆ.
ಕಾಂಗ್ರೆಸ್ ಅಭ್ಯರ್ಥಿ ಸ್ಥಳೀಯಾಡಳಿತ ವ್ಯವಸ್ಥೆಯನ್ನು ಬಲ್ಲವರಾಗಿದ್ದು, ಬಿಜೆಪಿ ಅಭ್ಯರ್ಥಿ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ ಎಂದರು.
ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆಯವರು ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು. ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಅಭ್ಯರ್ಥಿ ರಾಜು ಪೂಜಾರಿ ಮತ್ತಿತರರು ಇದ್ದರು.