Advertisement
ಬೆಂಗಳೂರಿನಲ್ಲಿರುವ ಮೆಟ್ರೋ ರೈಲಿನ ಮಾದರಿಯಲ್ಲಿ ಕಡಿಮೆ ವೆಚ್ಚದ ಮೆಟ್ರೋ ಲೈಟ್ ರೈಲುಗಳು ಮಂಗಳೂರಿಗೆ ಸೂಕ್ತ ಎಂಬ ಹಿನ್ನೆಲೆಯಲ್ಲಿ ಈ ಹಿಂದೊಮ್ಮೆ ರಾಜ್ಯ ಮುಂಗಡ ಪತ್ರದಲ್ಲಿಯೂ ಪ್ರಸ್ತಾವನೆ ಮಾಡಲಾಗಿತ್ತು. ಅನಂತರ ಕೇಂದ್ರ ಸರಕಾರ ದೇಶದ ಮಧ್ಯಮ ಮತ್ತು ಸಣ್ಣ ನಗರಗಳಲ್ಲಿ ಮೆಟ್ರೋ ಲೈಟ್ ರೈಲು ವ್ಯವಸ್ಥೆ ಅನುಷ್ಠಾನಗೊಳಿಸುವ ಯೋಜನೆ ರೂಪಿಸಿತ್ತು.
ಸ್ಕೈ ಬಸ್ ಯೋಜನೆಯೂ ಚರ್ಚೆಗೆ ಬಂದಿತ್ತು. ಆದರೆ ಅದು ಗೋವಾದಲ್ಲಿ ವಿಫಲ ವಾಗಿದೆ ಎಂಬ ಅಂಶಗಳ ಹಿನ್ನೆಲೆಯಲ್ಲಿ ನಿರ್ಲಕ್ಷಿಸಲ್ಪಟ್ಟಿತ್ತು. ಆ ಬಳಿಕ 2008ರ ಬಜೆಟ್‌ನಲ್ಲಿ ಮೋನೋ ರೈಲು ಪ್ರಸ್ತಾವನೆ ಮಾಡಲಾಗಿತ್ತು. ಸಾಧ್ಯತಾ ವರದಿ ತಯಾರಿಸಲು 1 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಅಶ್ವಾಸನೆ ದೊರೆತರೂ ಅದು ಕಾರ್ಯಗತಗೊಂಡಿಲ್ಲ . ಇವೆಲ್ಲದರ ನಡುವೆ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ , ಧಾರವಾಡಗಳಲ್ಲಿ ಮೋನೋ ರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲು ಮಲೇಷ್ಯಾದ ಸಂಸ್ಥೆಯೊಂದು ಆಸಕ್ತಿ ವಹಿಸಿತ್ತು. ಮಂಗಳೂರಿನಲ್ಲಿ 30 ಕಿ.ಮೀ. ವರೆಗೆ ಮೋನೋರೈಲು ಜಾಲ ಕಲ್ಪಿಸುವ ಬಗ್ಗೆ ಕಂಪೆನಿ ಪ್ರಸ್ತಾವನೆ ಮಾಡಿತ್ತು. ಈ ಬಗ್ಗೆ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆದಿದ್ದ ಬಗ್ಗೆಯೂ ವರದಿಯಾಗಿತ್ತು. ಏನಿದು ಮೆಟ್ರೋ ಲೈಟ್ ರೈಲು?
ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿ ವಾಲಯ ಮೆಟ್ರೋಲೈಟ್ ರೈಲು ಸಂಚಾರ ಯೋಜನೆ ರೂಪಿಸಿತ್ತು. ಮೆಟ್ರೋಲೈಟ್ ರೈಲಿನಲ್ಲಿ ಮೂರು ಬೋಗಿಗಳು ಇರುತ್ತವೆ. ಇದರಲ್ಲಿ 300 ಮಂದಿ ಪ್ರಯಾಣಿಸಬಹುದಾಗಿದೆ. ಪ್ರಸ್ತುತ ಇರುವ ರಸ್ತೆಗಳ ಮಧ್ಯೆ ಇರುವ ಸ್ಥಳಾವಕಾಶವನ್ನು ಉಪಯೋಗಿಸಿಕೊಂಡು ಮಾರ್ಗ ನಿರ್ಮಿಸಬಹುದಾಗಿದೆ. ಅಗತ್ಯ ಬಿದ್ದರೆ ಮೆಟ್ರೋಲೈಟ್ ಮಾರ್ಗಕ್ಕೆ ಬೇಲಿ ಹಾಕಿಕೊಳ್ಳ ಬಹುದು. ಈ ರೈಲು ಗಂಟೆಗೆ 60 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ರೈಲಿನೊಳಗೆ ಸಿಗ್ನಲ್ ವ್ಯವಸ್ಥೆ ವೈಫಲ್ಯ ಅನುಭವಿಸಿದರೂ 25 ಕಿ.ಮೀ. ಚಲಿಸಬಲ್ಲದು ಎಂದು ಮಾನದಂಡದಲ್ಲಿ ವಿವರಿಸಲಾಗಿದೆ. ಸಾಮಾನ್ಯವಾಗಿ ಪ್ರಸ್ತುತ ಮಹಾನಗರಗಳಲ್ಲಿ ಇರುವ ಮೆಟ್ರೋ ರೈಲು ವ್ಯವಸ್ಥೆಗಳಿಗೆ ಹೋಲಿಸಿದರೆ ಇವುಗಳ ವೆಚ್ಚ ಶೇ.40 ರಷ್ಟು ಕಡಿಮೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಸಣ್ಣ ನಗರಗಳು ಹಾಗೂ ಪಟ್ಟಣಗಳಿಗೆ ಮೆಟ್ರೋ ಲೈಟ್ ವ್ಯವಸ್ಥೆ ಆರ್ಥಿಕವಾಗಿ ಕಾರ್ಯಸಾಧುವಾಗಬಲ್ಲದು ಎಂಬುದು ಕೇಂದ್ರ ಸರಕಾರದ ಲೆಕ್ಕಾಚಾರವಾಗಿತ್ತು.
Related Articles
Advertisement