ಹೊಸದಿಲ್ಲಿ: ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನ ಇನ್ನೇನು ನಾಮಪತ್ರ ಸಲ್ಲಿಸಲು ಕೆಲವೇ ನಿಮಿಷಗಳು ಬಾಕಿಯಿರುವಂತೆ ಉತ್ತರ ಪ್ರದೇಶದ ದೇವರಿಯಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸಲು ಹರಸಾಹಸ ಪಡಬೇಕಾಯಿತು.
ದೇವರಿಯಾದಿಂದ ಬಿಜೆಪಿ ಅಭ್ಯರ್ಥಿ ಶಶಾಂಕ್ ಮಣಿ ತ್ರಿಪಾಠಿ ಮೇ 9 ರಂದು ನಾಮಪತ್ರ ಸಲ್ಲಿಸಬೇಕಿತ್ತು. ಈ ವೇಳೆ ಮೈಲ್ ಗ್ರೌಂಡ್ ಪಕ್ಕದ ಮದುವೆ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿದ್ದು, ಮುಖ್ಯ ಅತಿಥಿಗಳಾಗಿ ಉತ್ತರ ಪ್ರದೇಶ ಸರ್ಕಾರದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಆಗಮಿಸಿದ್ದರು.
ಸಾರ್ವಜನಿಕ ಸಭೆ ಮುಗಿದ ನಂತರ ಬಿಜೆಪಿ ಅಭ್ಯರ್ಥಿ ತ್ರಿಪಾಠಿ ನಾಮಪತ್ರ ಸಲ್ಲಿಸಲು ಬೃಹತ್ ಮೆರವಣಿಗೆ ನಡೆಸಿದರು. ಅವರ ಬೆಂಗಾವಲು ಪಡೆ ಕಲೆಕ್ಟರೇಟ್ ಕಚೇರಿಯಿಂದ 100 ಮೀಟರ್ ದೂರದಲ್ಲಿರುವ ಕಚ್ಚಾರಿ ಪ್ರದೇಶವನ್ನು ತಲುಪಿದಾಗ, ಪೊಲೀಸರು ಬ್ಯಾರಿಕೇಡ್‌ನಲ್ಲಿ ಎಲ್ಲರನ್ನು ತಡೆದರು, ಈ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಇದಾದ ನಂತರ ಬಿಜೆಪಿ ಅಭ್ಯರ್ಥಿ ತ್ರಿಪಾಠಿ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಪ್ರಸ್ತಾವಿಕರು ಪೊಲೀಸ್ ಬ್ಯಾರಿಕೇಡ್ ದಾಟಿ ಓಡಲಾರಂಭಿಸಿದರು. ಅಷ್ಟೋತ್ತಿಗಾಗಲೇ ಸಮಯ ಮಧ್ಯಾಹ್ನ 2.45 ಆಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ನಾಮಪತ್ರ ಸಲ್ಲಿಸಬೇಕಿತ್ತು. ಇದರಿಂದಾಗಿ ಬಿಜೆಪಿ ಅಭ್ಯರ್ಥಿ ತ್ರಿಪಾಠಿ ಓಟ ಆರಂಭಿಸಿದ್ದು, ನಿಗದಿತ ಸಮಯಕ್ಕೆ ತಲುಪುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಓಡೋಡಿ ಬಂದು ನಾಮಪತ್ರ ಸಲ್ಲಿಸಿರುವ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತರಿಗೆ, ನಾನು ಮೊದಲಿನಿಂದಲೂ ಓಟಗಾರನಾಗಿದ್ದೇನೆ ಎಂದು ಹೇಳಿದ ತ್ರಿಪಾಠಿ. ನಾನು ಐಐಟಿ ಅವಧಿಯಲ್ಲಿ 200 ಮತ್ತು 400 ಮೀಟರ್ ಓಟದಲ್ಲಿ ಚಿನ್ನದ ಪದಕ ವಿಜೇತನಾಗಿದ್ದೆ. ನಾನು ರೇಸಿಂಗ್ ಅನ್ನು ಆನಂದಿಸುತ್ತೇನೆ. ನಾನು ಕಳೆದ ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ಓಡುತ್ತಿದ್ದೇನೆ. ಇಲ್ಲಿನ ಮತದಾರರು ನನ್ನನ್ನು ಸಂಸದರನ್ನಾಗಿಸಿದರೆ ಮುಂದಿನ ಐದು ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.