Advertisement

Madhya Pradesh: ಅದೃಷ್ಟ ಚೆನ್ನಾಗಿತ್ತು…ಚಿರತೆಗೆ ತಮಾಷೆ-ಮೂವರ ಮೇಲೆ ದಾಳಿ!

03:11 PM Oct 22, 2024 | Team Udayavani |

ಶಾದೋಲ್(ಮಧ್ಯಪ್ರದೇಶ): ಸಫಾರಿ ವೇಳೆ ಪ್ರವಾಸಿಗರ ಹುಚ್ಚಾಟದಿಂದ ಪ್ರಾಣಿಗಳು ಅಟ್ಟಾಡಿಸುವ, ವಾಹನವನ್ನು ಏರಿ ತನ್ನ ಆಕ್ರೋಶವನ್ನು ಹೊರಹಾಕುವ ಹಲವು ಘಟನೆಗಳು ನಡೆದಿವೆ. ಇದೀಗ ಮಧ್ಯಪ್ರದೇಶದ ಶಾದೋಲ್‌ ಪ್ರದೇಶದ ಅರಣ್ಯ ವಿಭಾಗದಲ್ಲಿ ಚಿರತೆಯೊಂದು ಮೂವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಭಾನುವಾರ (ಅ.20) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Advertisement

ಶಾದೋಲ್‌ ವಲಯದ ಖಿತೌಲಿ ಬೀಟ್‌ ನ ಸೋನ್‌ ನದಿ ಪಾತ್ರದ ಬಳಿ ಗುಂಪೊಂದು ಪಿಕ್‌ ನಿಕ್‌ ಗೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ. ಚಿರತೆಯ ದಾಳಿಯಿಂದ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡ ಯುವಕನೊಬ್ಬ ಚಿತ್ರೀಕರಿಸಿದ್ದ 30 ಸೆಕೆಂಡ್‌ ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಚಿರತೆಗೆ ತಮಾಷೆ ಮಾಡುತ್ತ ವಿಡಿಯೋ ಚಿತ್ರೀಕರಣ ಮಾಡಿರುವುದು ದೃಶ್ಯದಲ್ಲಿದೆ.

ದುರುಗುಟ್ಟಿ ನೋಡುತ್ತಿದ್ದ ಚಿರತೆಯನ್ನು ಗುಂಪು ಬಾ, ಬಾ ಎಂದು ಕರೆಯುತ್ತಿದ್ದು, ಅದನ್ನು ಯುವಕನೊಬ್ಬ ತನ್ನ ಮೊಬೈಲ್‌ ನಲ್ಲಿ ಸೆರೆಹಿಡಿಯುತ್ತಿದ್ದ. ಆದರೆ ಈ ತಮಾಷೆ ಹೆಚ್ಚು ಹೊತ್ತು ಮುಂದುವರಿಯಲಿಲ್ಲ…ದಿಢೀರನೆ ವೇಗವಾಗಿ ಬಂದ ಚಿರತೆ ಯುವಕನ ಮೇಲೆ ದಾಳಿ ನಡೆಸಿ ಗಾಯಗೊಳಿಸಿಬಿಟ್ಟಿತ್ತು!

Advertisement

ಇಬ್ಬರು ಯುವಕರ ಮೇಲೆ ದಾಳಿ ನಡೆಸಿದ್ದ ಚಿರತೆ, ಮತ್ತೊಬ್ಬನನ್ನು ನೆಲದ ಮೇಲೆ ಹಾಕಿ ಕಚ್ಚಿ ಎಳೆದಾಡಿದ ದೃಶ್ಯ ವಿಡಿಯೋದಲ್ಲಿದೆ. ಚಿರತೆಯ ದಾಳಿಯಿಂದ ಕಂಗೆಟ್ಟ ಯುವಕರು ಬೊಬ್ಬೆ ಹೊಡೆಯುತ್ತ…ಓಡಿ, ಓಡಿ ಎಂದು ಹೇಳುತ್ತಿದ್ದು…ಚಿರತೆ ದಾಳಿ ನಡೆಸಿ ಓಡಿ ಹೋಗುವ ಮೊದಲು ವಿಡಿಯೋ ದೃಶ್ಯ ಕಟ್‌ ಆಫ್‌ ಆಗಿರುವುದಾಗಿ ವರದಿ ತಿಳಿಸಿದೆ.

ಕೆಲವು ದಿನಗಳ ಹಿಂದಷ್ಟೇ ಈ ಪ್ರದೇಶದಲ್ಲಿ ಹುಲಿಯೊಂದು ದಾಳಿ ನಡೆಸಿದ್ದ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಜನರು ಕಾಡಿನೊಳಗೆ ಸುತ್ತಾಟ ನಡೆಸಲು ಹೋಗಬಾರದು ಎಂದು ಉಪ ವಿಭಾಗೀಯ ಅರಣ್ಯಾಧಿಕಾರಿ ಬಾದ್‌ ಷಾ ರಾವತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next