ನವದೆಹಲಿ : ಬದುಕೇ ಹಾಗೆ ಕೆಲವು ಬಾರಿ ತಮ್ಮ ಕನಸುಗಳನ್ನೇ ಸುಟ್ಟು ಬಿಡುತ್ತದೆ. ಯಾವುದೋ ಕನಸನ್ನು ಕಟ್ಟಿಕೊಂಡು ನಾನು ಅದನ್ನು ನನಸು ಮಾಡಿಕೊಳ್ಳಬೇಕು ಎಂಬಷ್ಟರಲ್ಲಿ ಹೊಟ್ಟೆ ಪಾಡು ಆ ಕನಸನ್ನು ದೂರ ಸರಿಸಿ ಬೇರೆ ಇನ್ನೇನನ್ನೋ ಮಾಡಿಸುತ್ತದೆ. ಅದಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ ಅಭಿದ್ ಖಾನ್.
ವೃತ್ತಿಪರರಿಂದ ಬಾಕ್ಸಿಂಗ್ ಕಲಿತು, ಐದು ವರ್ಷಗಳ ಕಾಲ ಆರ್ಮಿ ಬಾಕ್ಸಿಂಗ್ ತಂಡಕ್ಕೆ ತರಬೇತಿಯನ್ನು ನೀಡಿದ್ದ ಅಭಿದ್ ಖಾನ್ ಇಂದು ರಸ್ತೆಯಲ್ಲಿ ಟ್ರಕ್ ಆಟೋವನ್ನು ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಯುವಕನಾಗಿದ್ದಾಗ ನಾನು ದೊಡ್ಡ ಮಟ್ಟದ ಬಾಕ್ಸರ್ ಆಗಿ ಮಿಂಚಬೇಕೆಂದು ಕನಸು ಕಂಡಿದ್ದ ಇವರು ಸದ್ಯ ಜೀವನ ಸಾಗಿಸಲು ಆಟೋ ಚಾಲಕನ ವೃತ್ತಿಯನ್ನು ಮಾಡುತ್ತಿದ್ದಾರೆ.
ಅಭಿದ್ ಖಾನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ನ ವಿದ್ಯಾರ್ಥಿಯಾಗಿದ್ದರು. ಅಲ್ಲದೆ 1988-89 ನೇ ಸಾಲಿನಲ್ಲಿ ಪಂಜಾಬ್ ವಿಶ್ವ ವಿದ್ಯಾಲಯದ ಬಾಕ್ಸಿಂಗ್ ಪಟುವಾಗಿ ಪ್ರತಿನಿಧಿಸಿದ್ದರು. ನಂತರದ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಅಭಿದ್ ಖಾನ್ ತಮ್ಮ ಬಾಕ್ಸಿಂಗ್ ಕನಸನ್ನು ಬಿಟ್ಟು ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಭಿದ್ ಖಾನ್ ಗೆ ಸದ್ಯ ಇಬ್ಬರು ಮಕ್ಕಳಿದ್ದು, ಈಗಲೂ ಇವರಿಗೆ ಬಾಕ್ಸಿಂಗ್ ಕೋಚಿಂಗ್ ಮಾಡಬೇಕು ಎಂಬ ಆಸೆ ಇದೆಯಂತೆ. ಆದರೆ ಆರ್ಥಿಕ ಸಂಕಷ್ಟ ಇರುವುದರಿಂದ ಸುಮ್ಮನಿರುವುದಾಗಿ ತಿಳಿಸಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭರಪೂರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇವರ ಕಥೆಯನ್ನು ಕೇಳಿ ಕೆಲವರು ಮರುಗಿದರೆ ಮತ್ತು ಕೆಲವರು ಸಹಾಯಕ್ಕೆ ಮುಂದಾಗುತ್ತಿದ್ದಾರೆ.