ಅಹಮದಾಬಾದ್: ವಜ್ರಗಳ ಮಾರಾಟ ಹಾಗೂ ಖರೀದಿಯ ಮಿನಿ ಬಜಾರ್ ಪ್ರದೇಶವಾದ ಗುಜರಾತ್ ನ ವರಾಚ್ಚಾ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ವಜ್ರದ ಪ್ಯಾಕೇಟ್ ವೊಂದು ಬಿದ್ದು ಹೋಗಿದೆ ಎಂಬ ವದಂತಿ ಹಬ್ಬಿದ ಪರಿಣಾಮ ರಸ್ತೆಯಲ್ಲಿ ಜನರು ಗುಂಪು, ಗುಂಪಾಗಿ ವಜ್ರ ಹುಡುಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:Sandalwood; ರಿಲಯನ್ಸ್ ತೆಕ್ಕೆಗೆ ಯೋಗರಾಜ್ ಭಟ್ರ ‘ಗರಡಿ’
ಅಹಮದಾಬಾದ್ ಮಿರರ್ ವರದಿಯ ಪ್ರಕಾರ, ವಜ್ರ ಮಾರಾಟದ ಉದ್ಯಮಿಯೊಬ್ಬರು ಬೈಕ್ ನಲ್ಲಿ ಬರುತ್ತಿದ್ದ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರದ ಪ್ಯಾಕೇಟ್ ಬಿದ್ದು ಹೋಗಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿರುವುದಾಗಿ ತಿಳಿಸಿದೆ.
ವಜ್ರದ ಚೀಲ ಕಳೆದುಹೋಗಿದೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಜನರು ಗುಂಪು, ಗುಂಪಾಗಿ ರಸ್ತೆಯಲ್ಲಿ ವಜ್ರಕ್ಕಾಗಿ ಹುಡುಕುತ್ತಿರುವ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೆಲವು ವ್ಯಕ್ತಿಗಳು ಮಾರ್ಕೆಟ್ ರಸ್ತೆಯಲ್ಲಿನ ಧೂಳನ್ನು ಸಂಗ್ರಹಿಸಿರುವುದಾಗಿ ವರದಿ ತಿಳಿಸಿದೆ. ಇದರಲ್ಲಿ ಕೆಲವರಿಗೆ ವಜ್ರಗಳು ಸಿಕ್ಕಿರುವುದಾಗಿ ವರದಿಯಾಗಿದೆ. ಆದರೆ ಇವು ಅಮೆರಿಕನ್ ಡೈಮಂಡ್ಸ್ (ನಕಲಿ ವಜ್ರ) ಎಂಬುದಾಗಿ ವರದಿ ವಿವರಿಸಿದೆ.
ವಜ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದ ವ್ಯಕ್ತಿಗಳಲ್ಲಿ ಒಬ್ಬರಾದ ಅರವಿಂದ್ ಪಾನ್ಸೇರಿಯಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತನಗೆ ಕೆಲವು ವಜ್ರದ ಹರಳು ಸಿಕ್ಕಿದೆ. ಆದರೆ ಇದು ನಕಲಿ ಅಮೆರಿಕನ್ ಡೈಮಂಡ್ ಆಗಿದೆ. ಇದನ್ನು ಸೀರೆ ಹಾಗೂ ಅಲಂಕಾರಕ್ಕಾಗಿ ಬಳಸಲಾಗುತ್ತದೆ. ಬಹುಶಃ ಜನರನ್ನು ಯಾಮಾರಿಸುವ ನಿಟ್ಟಿನಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿರಬಹುದು ಎಂದು ತಿಳಿಸಿರುವುದಾಗಿ ವರದಿ ತಿಳಿಸಿದೆ.