ಬೆಳ್ತಂಗಡಿ: ಕಾಡಾನೆ ಕಾಡು ಬಿಟ್ಟು ಊರಿನಲ್ಲೇ ಬೀಡು ಬಿಟ್ಟಿದ್ದು, ಬೆಳ್ತಂಗಡಿ ತಾಲೂಕಿನ ಪಟ್ರಮೆ ಬಳಿ ಓಡಾಟ ನಡೆಸುವ ವಿಡಿಯೋ ವೈರಲ್ ಆಗಿದೆ.
ಪಟ್ರಮೆ ಮಸೀದಿ ಬಳಿಯಿಂದ ಪಂಚವಟಿ ಶ್ಯಾಮಪ್ರಸಾದ್ ಎಂಬುವರ ತೋಟಕ್ಕೆ ತೆರಳಿ ಅಲ್ಲಿಂದ ಹೊಳೆದಾಟಿ ಮರ್ಲಾಜೆ ಹರಿರಾವ್ ಅವರ ತೋಟಕ್ಕೆ ನುಗ್ಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕುರಿತು ಸ್ಥಳೀಯರಿಗೆ ಎಚ್ಚರಿಕೆ ವಹಿಸುವಂತೆ ಎಲ್ಲ ಕಡೆಗಳಿಗೆ ಸಂದೇಶ ರವಾನಿಸಲಾಗಿದೆ.
ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ಆನೆಯನ್ನು ಕಾಡಿಗಟ್ಟಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಚಾರ್ಮಾಡಿ, ನೆರಿಯ, ಕಡಿರುದ್ಯಾವರ, ಮುಂಡಾಜೆ ಆಸುಪಾಸುಗಳಲ್ಲಿ ಕೃಷಿಗೆ ದಾಳಿ ನಡೆಸುತ್ತಿದೆ. ಕೃಷಿಕರು ಕೃಷಿ ನಾಶದಿಂದ ತತ್ತರಿಸಿದ್ದಾರೆ.
ಇದನ್ನೂ ಓದಿ:ಒಡಿಶಾದಲ್ಲಿ ಮುಂದುವರಿದ ರಷ್ಯನ್ ಪ್ರಜೆಗಳ ನಿಗೂಢ ಸಾವು…15 ದಿನಗಳಲ್ಲಿ 3ನೇ ಘಟನೆ
ಅರಣ್ಯ ಇಲಾಖೆಯಲ್ಲಿ ಸೀಮಿತ ಸಿಬಂದಿಯಿಂದ ಹೈರಾಣಾಗಿದ್ದು, ಸರಕಾರದಿಂದ ಆನೆ ಹಾವಳಿಗೆ ಬೇಕಾದ ಗಂಭೀರ ಯಾವುದೇ ಕ್ರಮ ವಹಿಸುತ್ತಿಲ್ಲ. ಆನೆ ಕಾರಿಡಾರ್, ಸೋಲಾರ್ ಬೇಲಿ, ಕಾವಡಿಗರಿಂದ ಆನೆ ಕಾಡಿಗಟ್ಟುವ ಪ್ರಕ್ರಿಯೆ ಎಲ್ಲವೂ ತೋರ್ಪಡಿಕಗಷ್ಟೆ ಎಂಬಂತಾಗಿದೆ. ಕೃಷಿಕರ ಸೊತ್ತು ಸತತ ನಷ್ಟದಲ್ಲಿ ತೊಡಗಿದೆ.