Advertisement
ಶಾಲೆಯಲ್ಲಿ ಮಗುವೊಂದು ಶಿಕ್ಷಕರು ಹೇಳಿಕೊಟ್ಟ ಪಕ್ಕೆಲುಬು ಎಂಬ ಶಬ್ದವನ್ನು ಸರಿಯಾಗಿ ಉಚ್ಚರಿಸಲು ಕಷ್ಟಪಡುತ್ತಿರುವ ಒಂದು ವೀಡಿಯೊ ತುಣುಕು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಒಂದು ರೀತಿಯಲ್ಲಿ ಆ ಮಗುವನ್ನು ಹಂಗಿಸುವಂತಿದ್ದ ಈ ವೀಡಿಯೊವನ್ನು ಯಾರು ಚಿತ್ರೀಕರಿಸಿದ್ದಾರೆ ಮತ್ತು ಯಾರು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದಾರೆ ಎನ್ನುವುದು ತನಿಖೆಯಿಂದ ಪತ್ತೆಯಾಗಬೇಕಷ್ಟೆ. ಆದರೆ ತರಗತಿ ಕೊಠಡಿಯೊಳಗೆ ನಡೆದಿರುವ ಘಟನೆಯಾಗಿರುವ ಕಾರಣ ಇದನ್ನು ಯಾರೋ ಶಿಕ್ಷಕರೇ ಚಿತ್ರೀಕರಿಸಬೇಕೆಂದೇ ನಂಬಲಾಗಿದೆ. ಇದೊಂದು ಚಿಕ್ಕ ಘಟನೆಯೇ ಆಗಿರಬಹುದು. ಆದರೆ ಎರಡು ವಿಚಾರಗಳ ಕುರಿತಾದ ಚರ್ಚೆಯನ್ನು ಇದು ಮುನ್ನೆಲೆಗೆ ತರುತ್ತದೆ, ಒಂದು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿರುವ ಲೋಪ ಮತ್ತು ಇನ್ನೊಂದು ಸಾಮಾಜಿಕ ಮಾಧ್ಯಮಗಳ ವಿವೇಚನಾರಹಿತ ಬಳಕೆ.
Related Articles
Advertisement
ಇದಕ್ಕೆ ಪೂರ್ಣವಾಗಿ ಶಿಕ್ಷಕರನ್ನೇ ಹೊಣೆ ಮಾಡುವುದೂ ಸರಿಯಾಗುವುದಿಲ್ಲ. ಏಕೆಂದರೆ ನಮ್ಮ ಶಿಕ್ಷಣ ವ್ಯವಸ್ಥೆಯ ಪಾಲೂ ಇಲ್ಲಿದೆ. ಮುಖ್ಯವಾಗಿ ಶಿಕ್ಷಕರ ತರಬೇತಿಗೆ ಸಂಬಂಧಪಟ್ಟಂತೆ ನಮ್ಮ ಸಾಧನೆ ಏನೇನೂ ಸಾಲದು. ವೃತ್ತಿಪರವಾದ, ಗುಣಮಟ್ಟದ ತರಬೇತಿ ಪಡೆದ ಶಿಕ್ಷಕರ ಕೊರತೆ ದೇಶದ ಎಲ್ಲೆಡೆ ಇರುವ ಒಂದು ಸಾಮಾನ್ಯ ಸಮಸ್ಯೆ. ಶಿಕ್ಷಣ ಹಕ್ಕು ಕಾಯಿದೆಯ ಪರಿಚ್ಛೇದ 23 ಸರಕಾರಿ ಶಾಲಾ ಶಿಕ್ಷಕರು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆ ಹೊಂದಿರುವುದನ್ನು ಕಡ್ಡಾಯಗೊಳಿಸಿದೆ. ಶಿಕ್ಷಕರಿಗೆ ತರಬೇತಿ ನೀಡಲು ಶಿಕ್ಷಣ ಇಲಾಖೆಯೇ ವಿವಿಧ ಕಾರ್ಯಕ್ರಮಗಳನ್ನೂ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದೆ. ಅದಾಗ್ಯೂ 2015-16ರ ಅಂಕಿ ಅಂಶದ ಪ್ರಕಾರ ಪ್ರಾಥಮಿಕ ಮಟ್ಟದಲ್ಲಿರುವ 66 ಲಕ್ಷ ಶಿಕ್ಷಕರ ಪೈಕಿ 1.1 ಶಿಕ್ಷಕರು ತರಬೇತಿ ರಹಿತರು. ಈ ಪೈಕಿ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 5,12,000 ಮತ್ತು ಖಾಸಗಿ ಶಾಲೆಗಳಲ್ಲಿ 5,98,000 ಶಿಕ್ಷಕರಿದ್ದಾರೆ ಎನ್ನುತ್ತಿದೆ ಈ ವರದಿ. ಸರಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಲು ಕೆಲವು ಕಠಿನ ನಿಯಮಾವಳಿಗಳಾದರೂ ಇವೆ. ಖಾಸಗಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿಗೆ ಇಂಥ ನಿಯಮಗಳೇನೂ ಇಲ್ಲ. ಶಿಕ್ಷಕರಾದವರು ಟಿಸಿಎಚ್, ಬಿಎಡ್, ಡಿಎಡ್‌ನಂಥ ಕೋರ್ಸ್‌ಗಳನ್ನು ಮಾಡಿರಬೇಕೆಂಬ ನಿಯಮಗಳಿದ್ದರೂ ಅವುಗಳು ಪಾಲಿಸುವುದಿಲ್ಲ. ಚೆನ್ನಾಗಿ ಇಂಗಿಷ್ ಓದಲು, ಮಾತನಾಡಲು ತಿಳಿದರೆ ಸಾಕು ಅವರಿಗೆ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ನೌಕರಿ ಸಿಗುತ್ತದೆ. ಕಡಿಮೆ ಸಂಬಳಕ್ಕೆ ದುಡಿಯುತ್ತಾರೆ ಎಂಬ ಕಾರಣಕ್ಕೆ ಶಾಲೆಗಳು ಇವರನ್ನು ನೇಮಿಸಿಕೊಳ್ಳುತ್ತವೆ. ಶಿಕ್ಷಕರು ಕಲಿಸುವುದನ್ನು ಒಂದು ಪವಿತ್ರ ಕಾರ್ಯ ಎಂದು ಭಾವಿಸದೆ, ಉಳಿದಂತೆ ಇದು ಕೂಡ ಬದುಕಲು ಇರುವ ಒಂದು ನೌಕರಿ ಎಂದು ಭಾವಿಸಿದರೆ ಇಂಥ ಅಪಸವ್ಯಗಳಾಗುತ್ತವೆ.