ನವದೆಹಲಿ: ದೆಹಲಿಯ ಕಾಶ್ಮೀರಿ ಗೇಟ್ ಪ್ರದೇಶದ ಜನಪ್ರಿಯ ಫತೇಹ್ ಕಚೋರಿ ಶಾಪ್ ನಲ್ಲಿ ನೆರೆದಿದ್ದ ಹತ್ತಾರು ಮಂದಿಗೆ ದುಸ್ವಪ್ನವಾಗಿ ಕಾಡಿತ್ತು..ಅದಕ್ಕೆ ಕಾರಣ ಮಿತಿಮೀರಿದ ವೇಗದಲ್ಲಿ ಬಂದ ಮರ್ಸಿಡಿಸ್ ಎಸ್ ಯುವಿ ಕಾರು ಏಕಾಏಕಿ ಒಳನುಗ್ಗಿದ್ದು, ಇದರ ಪರಿಣಾಮ ಆರು ಮಂದಿ ಗ್ರಾಹಕರು ಗಾಯಗೊಂಡಿರುವ ಘಟನೆ ಭಾನುವಾರ (ಮಾರ್ಚ್ 31) ನಡೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Mangaluru: ಆತ್ಮಹತ್ಯೆಗೆ ಯತ್ನಿಸಿದ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ
ಕಚೋರಿ ಶಾಪ್ ಒಳಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಈ ಭಯಾನಕ ಘಟನೆ ಸೆರೆಯಾಗಿದೆ. ಭಾನುವಾರ ಮಧ್ಯಾಹ್ನ 3ಗಂಟೆ ಹೊತ್ತಿಗೆ ಕಚೋರಿ ಶಾಪ್ ನಲ್ಲಿ ಹಲವು ಗ್ರಾಹಕರು ಚಾಟ್ಸ್ ಸೇವನೆಯಲ್ಲಿ ತೊಡಗಿದ್ದರು. ಆಗ ಮರ್ಸಿಡಿಸ್ ಎಸ್ ಯುವಿ ಕಾರು ದಿಢೀರನೆ ಶಾಪ್ ಒಳಗೆ ನುಗ್ಗಿದ್ದು, ಸುತ್ತ-ಮುತ್ತ ಇದ್ದ ಟೇಬಲ್, ಜನರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರು.
ಗೋಡೆಗೆ ಡಿಕ್ಕಿ ಹೊಡೆದು ನಿಂತ ಎಸ್ ಯುವಿ ಕಾರು ರಿವರ್ಸ್ ತೆಗೆದು ಶಾಪ್ ನಿಂದ ಹೊರಗೆ ನಿಂತ ಮೇಲೆ ಗ್ರಾಹಕರು ತಮ್ಮ ಕುಟುಂಬ ಸದಸ್ಯರನ್ನು ಗಾಬರಿಯಲ್ಲಿ ಹುಡುಕುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಗ್ರಾಹಕನೊಬ್ಬ ಕಾರಿನ ಅಡಿಭಾಗದಲ್ಲಿ ಪತ್ನಿ ಬಿದ್ದಿರಬಹುದೇ ಎಂದು ಹುಡುಕುತ್ತಿದ್ದ ವೇಳೆ ಹಿಂಭಾಗ ಹೋಗಿ ಬಿದ್ದಿದ್ದ ಪತ್ನಿಯೇ ಎದ್ದು ಬಂದು ಪತಿಯನ್ನು ಕರೆದಾಗ ಪತಿ ನಿಟ್ಟುಸಿರು ಬಿಟ್ಟು, ಗಾಯಗೊಂಡ ಆಕೆಯನ್ನು ತಬ್ಬಿ ಹಿಡಿದು ಕರೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
ಒಬ್ಬ ಗ್ರಾಹಕನ ಕಾಲಿಗೆ ಬಲವಾದ ಏಟು ಬಿದ್ದಿದ್ದು, ಕೆಲವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಪೊಲೀಸರ ಮಾಹಿತಿ ಪ್ರಕಾರ, ನೋಯ್ಡಾ ನಿವಾಸಿ, ಪರಾಗ್ ಮೈನಿ (36) ಎಂಬ ವಕೀಲ ಕಾರನ್ನು ಚಲಾಯಿಸುತ್ತಿದ್ದ. ಘಟನೆಗೆ ಸಂಬಂಧಿಸಿದಂತೆ ಮಿತಿಮೀರಿದ ವೇಗದಲ್ಲಿ ಕಾರನ್ನು ಚಲಾಯಿಸಿದ ಆರೋಪದಡಿ ಪರಾಗ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.