Advertisement

ಜನ-ಜಾನುವಾರು ರಕ್ಷಣೆಗೆ ಕ್ರಮ ಕೈಗೊಳ್ಳಿ

11:17 AM Jun 20, 2021 | Team Udayavani |

ಗದಗ: ನೆರೆ ರಾಜ್ಯ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುಗಡೆಗೂ ಮುನ್ನವೇ ಮಾಹಿತಿ ನೀಡಲಾಗುವುದು ಎಂದು ಮಹಾರಾಷ್ಟ್ರದ ನೀರಾವರಿ ಸಚಿವರು ತಿಳಿಸಿದ್ದಾರೆ. ಇದರಿಂದ ಪ್ರವಾಹ ಸ್ಥಿತಿಯ ಸಮರ್ಪಕ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ರಾಜ್ಯದ ಪ್ರವಾಹ ಸಿದ್ಧತೆ ಕುರಿತು ಗದಗ ಜಿಲ್ಲೆ ಸೇರಿದಂತೆ ರಾಜ್ಯದ 20 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಶನಿವಾರ ಜರುಗಿದ ವಿಡಿಯೋ ಸಂವಾದ ಸಭೆಯಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು. ಜಲಾಶಯಗಳಿಂದ ನೀರು ಬಿಡುಗಡೆ ಕುರಿತ ಮಾಹಿತಿ ವಿನಿಮಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ನೀರಾವರಿ ಸಚಿವರ ಜತೆ ಈಗಾಗಲೇ ಸಭೆ ನಡೆಸಿ ಚರ್ಚಿಸಲಾಗಿದೆ. ಜಲಾಶಯಗಳಿಂದ ರಾಜ್ಯಕ್ಕೆ ನೀರು ಬಿಡುಗಡೆ ಕುರಿತು ಮುಂಚಿತವಾಗಿ ಮಾಹಿತಿ ನೀಡಲಾಗುವುದು. ಜನರು ಮತ್ತು ಜಾನುವಾರುಗಳ ರಕ್ಷಣೆ ಮತ್ತು ತಾತ್ಕಾಲಿಕ ಪುನರ್ವಸತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ಜಿಲ್ಲೆಯ ಸ್ಥಳಾಂತರ ಗ್ರಾಮಗಳಲ್ಲಿ ನಿರ್ಮಿಸಲಾದ ಮನೆಗಳ ದುರಸ್ತಿಗಾಗಿ ಅನುದಾನದ ಅಗತ್ಯವಿದೆ ಹಾಗೂ ಮಲಪ್ರಭಾ ನದಿಯ ಒತ್ತುವರಿ ತೆರವುಗೊಳಿಸಿದಲ್ಲಿ ಜಿಲ್ಲೆಗೆ ಪ್ರವಾಹ ಭೀತಿ ಕಡಿಮೆಯಾಗಲಿದೆ ಎಂದರು. ಜಿಲ್ಲಾಧಿ ಕಾರಿ ಎಂ. ಸುಂದರೇಶ್‌ ಬಾಬು ಮಾತನಾಡಿ, ಸದ್ಯಕ್ಕೆ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿಲ್ಲ. ಎರಡು ದಿನಗಳಿಂದ ಹೆಚ್ಚಿನ ಮಳೆಯಾಗಿದೆ. ಪ್ರವಾಹ ಸ್ಥಿತಿ ನಿಯಂತ್ರಣದಲ್ಲಿದೆ. ಪ್ರವಾಹ ಮತ್ತಿತರ ತುರ್ತು ಪರಿಸ್ಥಿತಿ ನಿರ್ವಹಣೆಗೆ ಯಾವುದೇ ರೀತಿಯ ಹಣಕಾಸಿನ ತೊಂದರೆಗಳಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

ಬೆಣ್ಣೆ ಹಳ್ಳ ಹಾಗೂ ಮಲಪ್ರಭಾ ನದಿಯಿಂದ ಪ್ರವಾಹಕ್ಕೆ ಒಳಗಾಗುವ ಗ್ರಾಮಗಳನ್ನು ಗುರುತಿಸಲಾಗಿದೆ. ಜಿಲ್ಲೆಯ ರೋಣ ತಾಲೂಕಿನಲ್ಲಿ 16, ನರಗುಂದ 16, ಶಿರಹಟ್ಟಿ 10, ಮುಂಡರಗಿ 11 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 53 ಗ್ರಾಮಗಳು ಪ್ರವಾಹಕ್ಕೆ ಒಳಗಾಗುವ ಸಂಭವವಿದೆ. ಇದಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ಅಗತ್ಯವಿದ್ದಲ್ಲಿ ತಕ್ಷಣ ತೆರೆಯಲು ಕ್ರಮ ವಹಿಸಲಾಗುವುದು. ನರಗುಂದ 13, ರೋಣ 17, ಮುಂಡರಗಿ 5, ಶಿರಹಟ್ಟಿ 8 ಕಡೆಗಳಲ್ಲಿ ಕಾಳಜಿ ಕೇಂದ್ರ ಗುರುತಿಸಿಟ್ಟುಕೊಳ್ಳಲಾಗಿದೆ ಎಂದರು.

ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್‌.ಅಶೋಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ವಿ.ಸೋಮಣ್ಣ, ಶಶಿಕಲಾ ಜೊಲ್ಲೆ ಸೇರಿದಂತೆ ವಿವಿಧ ಇಲಾಖೆಗಳ ಸಚಿವರು ಉಪಸ್ಥಿತರಿದ್ದರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌., ಜಿಪಂ ಸಿಇಒ ಭರತ್‌ ಎಸ್‌., ಅಪರ ಜಿಲ್ಲಾಧಿಕಾರಿ ಸತೀಶ್‌ ಕುಮಾರ್‌ ಎಂ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್‌. ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next