ಚಿತ್ರದುರ್ಗ: ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ ನಡೆದಿರುವ ಬಗ್ಗೆ ತಿಳಿದು ಬಂದಿದೆ. ಶಾಸಕರ ಮೊಬೈಲ್ ಗೆ ಮೂರು ಬಾರಿ ಅಪರಿಚಿತ ಯುವತಿಯಿಂದ ವೀಡಿಯೋ ಕಾಲ್ ಬಂದಿದ್ದು, ಈ ಸಂಬಂಧ ಶಾಸಕರ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುವ ಭರವಸೆ ನೀಡಿದ್ದಾರೆ.
ಈ ಸಂಬಂಧ CEN ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಐಟಿ ಕಾಯ್ದೆ 66 (A) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ರಾಜಸ್ಥಾನ, ಒರಿಸ್ಸಾ ಭಾಗದಿಂದ ವಿಡಿಯೋ ಕಾಲ್ ಬಂದಿರುವ ಬಗ್ಗೆ ಮಾಹಿತಿ ದೊರಕಿದ್ದು, ವಿಡಿಯೋ ಕಾಲ್ ಮಾಡಿ ಖಾಸಗಿ ಅಂಗ ತೋರಿಸಿದ್ದಾಳೆ ಎಂದು ಶಾಸಕರು ಹೇಳಿದ್ದು, ತಕ್ಷಣಕ್ಕೆ ಮೊಬೈಲ್ ಪಕ್ಕಕ್ಕೆ ಇಟ್ಟಿರುವುದಾಗಿ ತಿಪ್ಪಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಇದಾದ ಬಳಿಕ ಕಾಲ್ ಬಂದಿದ್ದ ಮೊಬೈಲ್ ನಂಬರ್ ಬ್ಲಾಕ್ ಮಾಡಿಸಿದ್ದೇನೆ. ಕಾಲ್ ಕಟ್ ಮಾಡಿದ ಬಳಿಕ ಕೆಲ ವಿಡಿಯೋಸ್ ವಾಟ್ಸಪ್ ಮಾಡಿದ್ದರು ಎಂದು ಶಾಸಕರು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.