ಪಾಟ್ನಾ: ಆರೋಪಿಗಳನ್ನು ಕೋರ್ಟಿಗೆ ಹಾಜರಿ ಪಡಿಸುವ ಪೊಲೀಸ್ ವಾಹನದ ಡಿಸೇಲ್ ಖಾಲಿಯಾದರೆ ಮುಂದೇನಾಗಬಹುದು..?
ಇಂಥದ್ದೇ ಒಂದು ಘಟನೆ ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ನಡೆದಿದೆ. ಮದ್ಯ ಸೇವಿಸಿದ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳನ್ನು ಕೋರ್ಟಿಗೆ ಹಾಜರಿಪಡಿಸುವ ನಿಟ್ಟಿನಲ್ಲಿ ಪೊಲೀಸರ ಮಹೀಂದ್ರಾ ಸ್ಕಾರ್ಪಿಯೋ ವಾಹನದಲ್ಲಿ ಕರೆದುಕೊಂಡು ಹೋಗಲಾಗಿತ್ತು.
ಇದನ್ನೂ ಓದಿ: Balia; ವಧು-ವರರಾಗಿ ಬಂದರೆ 2000 ರೂ.; ಭಾರೀ ವಿವಾಹ ವಂಚನೆ ಬಯಲು
ಕಾರಿನಲ್ಲಿ ಹೋಗುವ ವೇಳೆ ನಡುರಸ್ತೆಯಲ್ಲೇ ವಾಹನ ನಿಂತಿದೆ. ವಾಹನದ ಡಿಸೇಲ್ ಖಾಲಿಯಾಗಿದ್ದು, ಈ ವೇಳೆ ಓರ್ವ ಪೊಲೀಸ್ ಅಧಿಕಾರಿ ಸ್ಟೀರಿಂಗ್‌ನಲ್ಲಿದ್ದರು ಮತ್ತು ಇತರ ಅಧಿಕಾರಿ ಆರೋಪಿಯನ್ನು ನೋಡಿಕೊಳ್ಳುತ್ತಿದ್ದರು. ಸ್ವಲ್ಪ ಸಮಯದ ನಂತರ ಪೊಲೀಸ್ ಅಧಿಕಾರಿ ಆರೋಪಿಗಳನ್ನು ಕಾರಿನಿಂದ ಕೆಳಗಿಳಿಸಿ ಕಾರನ್ನು ತಳ್ಳಲು ಹೇಳಿದ್ದಾರೆ. ನಾಲ್ವರು ಆರೋಪಿಗಳನ್ನು ಪರಸ್ಪರ ಹಗ್ಗದಿಂದ ಕಟ್ಟಿ ವಾಹನವನ್ನು ತಳ್ಳಿಸಿದ್ದಾರೆ. ಈ ದೃಶ್ಯವನ್ನು ನೋಡುಗರು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದಾರೆ. ಆರೋಪಿಗಳು ವಾಹನವನ್ನು 500 ಮೀಟರ್‌ಗೂ ಹೆಚ್ಚು ದೂರ ತಳ್ಳಿದ್ದಾರೆ ಎನ್ನಲಾಗಿದೆ.
ಭಾರೀ ಪ್ರಮಾದಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.