ನವದೆಹಲಿ: ಮಣಿಪುರದ ಸಂಘರ್ಷದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಹೇಳಿಕೆ ನೀಡಲೇಬೇಕು ಎಂದು ಪಟ್ಟು ಹಿಡಿದಿರುವ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಲು ಅವಕಾಶ ನೀಡಬೇಕೆಂದು ಕೋರಿ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಿದ್ದು, ಏತನ್ಮಧ್ಯೆ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಭವಿಷ್ಯ ನುಡಿದಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಇದನ್ನೂ ಓದಿ:ಸಾಫ್ಟ್ ವೇರ್ ಕದ್ದು ಮಾರುತ್ತಿದ್ದ ತಾಂತ್ರಿಕ ಪದವೀಧರನ ಬಂಧನ
2019ರ ಫೆಬ್ರುವರಿ 7ರಂದು ಸಂಸತ್ ನಲ್ಲಿ ಪ್ರಧಾನಿ ಮೋದಿ ಅವರು ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯ ಕುರಿತು ಮಾತನಾಡುತ್ತ, ಪ್ರತಿಪಕ್ಷಗಳಿಗೆ 2023ರಲ್ಲಿಯೂ ಬಿಜೆಪಿ ಸರ್ಕಾರದ ವಿರುದ್ಧ ಇದೇ ರೀತಿ ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ಅವಕಾಶ ನೀಡಲಿ ಎಂದು ಕೇಳಿಕೊಳ್ಳುವುದಾಗಿ ವ್ಯಂಗ್ಯವಾಡಿದ್ದರು.
2019ರಲ್ಲಿ ವಿಪಕ್ಷಗಳು ಲೋಕಸಭೆಯಲ್ಲಿ ಎನ್ ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದ ವೇಳೆ ಅಂದು ಎನ್ ಡಿಎ ಮೈತ್ರಿಕೂಟ 195 ಮತಗಳಿಂದ ಗೆಲುವು ಕಂಡಿತ್ತು. ಒಟ್ಟು 330 ಸಂಸದರು ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, 2023ರಲ್ಲಿಯೂ ಪ್ರತಿಪಕ್ಷಗಳಿಗೆ ಅವಿಶ್ವಾಸ ಗೊತ್ತುವಳಿ ಮಂಡಿಸುವ ಇಂತಹ ಅವಕಾಶ ಸಿಗಲಿ ಎಂದು ನಾನು ಶುಭ ಹಾರೈಸುತ್ತೇನೆ ಎಂದು ಲೋಕಸಭೆಯಲ್ಲಿ ನಗುತ್ತಾ ಚಾಟಿ ಬೀಸಿದ್ದರು…ಈ ಹೇಳಿಕೆಯನ್ನು ಬಿಜೆಪಿ ಸಂಸದರು ಮೇಜು ಕುಟ್ಟಿ ಸ್ವಾಗತಿಸಿದ್ದರು.
ಇದೀಗ ಮಣಿಪುರ ಹಿಂಸಾಚಾರ ವಿಚಾರದಲ್ಲಿ ಪ್ರಧಾನಿ ಮೋದಿ ಹೇಳಿಕೆ ನೀಡಲೇಬೇಕು ಎಂದು ಪಟ್ಟು ಹಿಡಿದಿರುವ ವಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು 2019ರಲ್ಲಿ ನುಡಿದ ಭವಿಷ್ಯದ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.