ನಾಗ್ಪುರ: ಭಾರತದ ಕ್ರಿಕೆಟ್ ಭೂಪಟದಲ್ಲಿ ಅಜ್ಞಾತವಾಗಿಯೇ ಉಳಿದಿದ್ದ ವಿದರ್ಭ ತಂಡ ಮತ್ತೆ ಪ್ರಜ್ವಲಿಸಲಾರಂಭಿಸಿದೆ. ಸತತ 2ನೇ ಸಲ ರಣಜಿ ಟ್ರೋಫಿ ಗೆದ್ದು ದೇಶಿ ಕ್ರಿಕೆಟಿನ ದೊರೆ ಎನಿಸಿದೆ. ಗುರುವಾರ ಇಲ್ಲಿ ಮುಗಿದ 2018-19ನೇ ಸಾಲಿನ ಫೈನಲ್‌ನಲ್ಲಿ ಫೈಜ್ ಫಜಲ್ ನೇತೃತ್ವದ ಆತಿಥೇಯ ವಿದರ್ಭ 78 ರನ್ನುಗಳಿಂದ ಬಲಿಷ್ಠ ಸೌರಾಷ್ಟ್ರವನ್ನು ಮಣಿಸಿತು; ಕಳೆದ ವರ್ಷ ರಣಜಿ ಟ್ರೋಫಿ ಗೆದ್ದದ್ದು ಆಕಸ್ಮಿಕ ಅಲ್ಲ ಎಂಬುದನ್ನು ಸಾಬೀತುಪಡಿಸಿತು.
ವಿದರ್ಭ ಕಳೆದ ಸಲ ಮೊದಲ ಬಾರಿ ರಣಜಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಇಂದೋರ್‌ನಲ್ಲಿ ನಡೆದ ಪ್ರಶಸ್ತಿ ಸಮರದಲ್ಲಿ ದಿಲ್ಲಿ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತ್ತು. ಗುರುವಾರದ ಜಯ ಭೇರಿಯೊಂದಿಗೆ ರಣಜಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ 6ನೇ ತಂಡವೆನಿಸಿತು. ಉಳಿದ ತಂಡಗಳೆಂದರೆ ಮುಂಬಯಿ, ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ, ದಿಲ್ಲಿ.
ಇನ್ನೊಂದೆಡೆ ಸೌರಾಷ್ಟ್ರ 3ನೇ ಸಲ ಫೈನಲ್ ಪ್ರವೇಶಿಸಿಯೂ ಚಾಂಪಿಯನ್ ಎನಿಸಿ ಕೊಳ್ಳುವಲ್ಲಿ ವಿಫಲವಾಯಿತು. 2012-13 ಮತ್ತು 2015-16ರಲ್ಲಿ ಫೈನಲ್‌ಗೆ ಲಗ್ಗೆ ಇರಿಸಿದ್ದ ಸೌರಾಷ್ಟ್ರ ತಂಡ, ಅಲ್ಲಿ ಬಲಾಡ್ಯ ಮುಂಬಯಿಗೆ ಶರಣಾಗಿತ್ತು. ಗೆಲುವಿಗೆ 206 ರನ್ನುಗಳ ಗುರಿ ಪಡೆದಿದ್ದ ಸೌರಾಷ್ಟ್ರ 4ನೇ ದಿನದ ಕೊನೆಯಲ್ಲಿ 5 ವಿಕೆಟಿಗೆ 58 ರನ್ ಗಳಿಸಿ ಸೋಲಿನತ್ತ ಮುಖ ಮಾಡಿತ್ತು. ಎಡಗೈ ಸ್ಪಿನ್ನರ್ ಆದಿತ್ಯ ಸರ್ವಟೆ ಸೌರಾಷ್ಟ್ರದ ಮೇಲೆ ಘಾತಕವಾಗಿ ಎರಗಿದ್ದರು. 23 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ವಿಶ್ವರಾಜ್ ಜಡೇಜ ಒಬ್ಬರೇ ಸೌರಾಷ್ಟ್ರದ ಆಶಾಕಿರಣವಾಗಿ ಉಳಿದಿದ್ದರು.
ಆದರೆ ಅಂತಿಮ ದಿನದಾಟ ದಲ್ಲಿ ಸೌರಾಷ್ಟ್ರದಿಂದ ಪವಾಡ ಸಾಧ್ಯ ವಾಗಲಿಲ್ಲ. ಇನ್ನೆರಡು ಅವಧಿಗಳ ಆಟ ಉಳಿದಿರುವಂತೆಯೇ 127 ರನ್ನಿಗೆ ಆಲೌಟ್ ಆಯಿತು. ಅಂತಿಮ ದಿನ ಉರುಳಿದ 5 ವಿಕೆಟ್‌ಗಳಲ್ಲಿ ಮೂರನ್ನು ಸರ್ವಟೆ ಅವರೇ ಬುಟ್ಟಿಗೆ ಹಾಕಿಕೊಂಡರು. ಸರ್ವಟೆ ಸಾಧನೆ 59ಕ್ಕೆ 6 ವಿಕೆಟ್. ಮೊದಲ ಸರದಿಯಲ್ಲೂ ಘಾತಕವಾಗಿ ಪರಿಣ ಮಿಸಿದ ಅವರು 5 ವಿಕೆಟ್ ಉರು ಳಿಸಿದ್ದರು. ಒಟ್ಟು ಸಾಧನೆ 157ಕ್ಕೆ 11 ವಿಕೆಟ್. ಅವರು ಪಂದ್ಯದಲ್ಲಿ 10 ಪ್ಲಸ್ ವಿಕೆಟ್ ಕಿತ್ತ ಮೊದಲ ನಿದರ್ಶನ ಇದಾಗಿದೆ. ಬ್ಯಾಟಿಂಗಿನಲ್ಲೂ ಸೈ ಎನಿಸಿ ಕೊಂಡ ಸರ್ವಟೆ ಮೊದಲ ಸರದಿಯಲ್ಲಿ 49 ರನ್ ಹೊಡೆದಿದ್ದರು.
ತೀವ್ರಗೊಂಡ ಕುಸಿತ
ನಾಟೌಟ್ ಬ್ಯಾಟ್ಸ್‌ಮನ್‌ಗಳಾದ ವಿಶ್ವರಾಜ್ ಜಡೇಜ (52) ಮತ್ತು ಕಮಲೇಶ್ ಮಕ್ವಾನಾ (14) ಒಂದು ಗಂಟೆ ಕಾಲ ಕ್ರೀಸ್ ಆಕ್ರಮಿಸಿಕೊಳ್ಳಲು ಯಶಸ್ವಿಯಾದರು. ಆದರೆ ಮಕ್ವಾನಾ ಅವರನ್ನು ಬೌಲ್ಡ್ ಮಾಡುವ ಮೂಲಕ ಸರ್ವಟೆ ಈ ಜೋಡಿಯನ್ನು ಬೇರ್ಪಡಿಸಿದರು. ಇಲ್ಲಿಂದ ಮುಂದೆ ಸೌರಾಷ್ಟ್ರ ಪತನ ತೀವ್ರಗೊಂಡಿತು. ವಿಶ್ವರಾಜ್ 8ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡರು.
ನಾವು ಕಳೆದ ಸಲ ರಣಜಿ
ಟ್ರೋಫಿ ಗೆದ್ದಾಗ ಇದೊಂದು ಆಕಸ್ಮಿಕ ಎಂದು ಹೇಳಿದವರೇ ಅಧಿಕ. ಹೀಗಾಗಿ ನಮ್ಮ ಮೇಲೆ ಪ್ರಶಸ್ತಿ ಉಳಿಸಿಕೊಳ್ಳುವ ಒತ್ತಡ ತೀವ್ರವಾಗಿತ್ತು. ಈಗ ನಿರಾಳರಾಗಿದ್ದೇವೆ. ಹುಡುಗರ ಸಾಧನೆ ಅಮೋಘ
ಚಂದ್ರಕಾಂತ್ ಪಂಡಿತ್, ವಿದರ್ಭ ಕೋಚ್
ಸಂಕ್ಷಿಪ್ತ ಸ್ಕೋರ್
ವಿದರ್ಭ-312 ಮತ್ತು 200. ಸೌರಾಷ್ಟ್ರ-307 ಮತ್ತು 127 (ವಿಶ್ವರಾಜ್ ಜಡೇಜ 52, ಧರ್ಮೇಂದ್ರ ಜಡೇಜ 17, ಮಕ್ವಾನಾ 14, ಸ್ನೆಲ್ 12, ಸರ್ವಟೆ 59ಕ್ಕೆ 6, ವಖಾರೆ 37ಕ್ಕೆ 3).
ಪಂದ್ಯಶ್ರೇಷ್ಠ: ಆದಿತ್ಯ ಸರ್ವಟೆ.