Advertisement

Ranaji Trophy: ಮಧ್ಯಪ್ರದೇಶ- ಕರ್ನಾಟಕ ಪಂದ್ಯ ಡ್ರಾ

12:35 AM Oct 15, 2024 | Team Udayavani |

ಇಂದೋರ್‌: ಇಲ್ಲಿನ ಹೋಳ್ಕರ್‌ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಎಲೈಟ್‌ “ಸಿ’ ಬಣದಲ್ಲಿ ಮಧ್ಯಪ್ರದೇಶ ಮತ್ತು ಕರ್ನಾಟಕ ನಡುವಿನ ಪಂದ್ಯ ಡ್ರಾಗೊಂಡಿದೆ. ಆದರೆ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಮಧ್ಯ ಪ್ರದೇಶ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. ಕರ್ನಾಟಕ 5ನೇ ಸ್ಥಾನದಲ್ಲಿದೆ.

Advertisement

ಮುಂದಿನ ಹಂತದ ಪಂದ್ಯಗಳು ಅ. 26ರಿಂದ ಆರಂಭವಾಗಲಿದ್ದು, ಕರ್ನಾಟಕ ತಂಡ ಬಿಹಾರ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯ ಬಿಹಾರದಲ್ಲಿ ನಡೆಯಲಿದೆ.
ಮಧ್ಯಪ್ರದೇಶ ತಂಡ 8 ವಿಕೆಟಿಗೆ 425 ರನ್‌ ಬಾರಿಸಿ ಡಿಕ್ಲೇರ್‌ ಘೋಷಿಸಿತ್ತು. ಆಬಳಿಕ ಆಟ ಆರಂಭಿಸಿದ ಕರ್ನಾಟಕ ಪಂದ್ಯ ಡ್ರಾದಲ್ಲಿ ಅಂತ್ಯಗೊಳಿಸಿದಾಗ 75 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 206 ರನ್‌ ಗಳಿಸಿತ್ತು.

ಕರ್ನಾಟಕ ಪರ ಆರಂಭಿಕ ಆಟಗಾರ ನಿಕಿನ್‌ ಜೋಸ್‌ 99, ಶ್ರೇಯಸ್‌ ಗೋಪಾಲ್‌ ಅಜೇಯ 60 ರನ್‌ ಬಾರಿಸಿ ಗಮನ ಸೆಳೆದರು. ಈ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮಧ್ಯಪ್ರದೇಶ ತಂಡದ ಪರ ನಾಯಕ ಶುಭಂ ಶರ್ಮಾ 143, ಹರ್‌ಪ್ರೀತ್‌ ಸಿಂಗ್‌ 91 ರನ್‌ ಕೊಡುಗೆ ನೀಡಿದ್ದರು.

ಸಂಕ್ಷಿಪ್ತ ಸ್ಕೋರ್‌: ಮಧ್ಯಪ್ರದೇಶ ಮೊದಲ ಇನ್ನಿಂಗ್ಸ್‌ 8 ವಿಕೆಟಿಗೆ 425 ಡಿಕ್ಲೇರ್‌ (ಶುಭಂ 143, ಹರ್‌ಪ್ರೀತ್‌ 91, ಕೌಶಿಕ್‌ 78ಕ್ಕೆ 2), ಕರ್ನಾಟಕ ಮೊದಲ ಇನ್ನಿಂಗ್ಸ್‌ 5 ವಿಕೆಟಿಗೆ 206 (ನಿಕಿನ್‌ 99, ಶ್ರೇಯಸ್‌ 60, ಕಾರ್ತಿಕೇಯ 68ಕ್ಕೆ 3).

ಮುಂಬಯಿಗೆ ಸೋಲಿನ ಆಘಾತ
ವಡೋದರ: ಎಡಗೈ ಸ್ಪಿನ್ನರ್‌ ಭಾರ್ಗವ್‌ ಭಟ್‌ ಅವರ ಮಾರಕ ದಾಳಿಯ ನೆರವಿನಿಂದ ಬರೋಡ ತಂಡವು ರಣಜಿ ಟ್ರೋಫಿಯ “ಎ’ ಬಣದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬಯಿ ತಂಡವನ್ನು 84 ರನ್ನುಗಳಿಂದ ಸೋಲಿಸಿ ಆಘಾತವಿಕ್ಕಿದೆ.

Advertisement

ಪಂದ್ಯದ ಅಂತಿಮ ದಿನ ಗೆಲ್ಲಲು 220 ರನ್‌ ಗಳಿಸಬೇಕಾಗಿದ್ದ ಮುಂಬಯಿ ತಂಡವು 34ರ ಹರೆಯದ ಭಾರ್ಗವ್‌ ದಾಳಿಗೆ ನಾಟಕೀಯ ಕುಸಿತ ಕಂಡು 177 ರನ್ನಿಗೆ ಆಲೌಟಾಗಿ ಸೋಲನ್ನು ಕಂಡಿತು. ತನ್ನ 19.4 ಓವರ್‌ಗಳ ದಾಳಿಯಲ್ಲಿ ಭಾರ್ಗವ್‌ 55 ರನ್ನಿಗೆ ಆರು ವಿಕೆಟ್‌ ಕಿತ್ತು ತಂಡದ ಗೆಲುವಿನಲ್ಲಿ ಮಹತ್ತರ ಕೊಡುಗೆ ಸಲ್ಲಿಸಿದರು.

ಗೆಲ್ಲಲು 262 ರನ್‌ ಗಳಿಸಬೇಕಾಗಿದ್ದ ಮುಂಬಯಿ ತಂಡ ಅಂತಿಮ ದಿನ 2 ವಿಕೆಟಿಗೆ 42 ರನ್ನುಗಳಿಂದ ಆಟ ಆರಂಭಿಸಿತ್ತು. ಸಿದ್ದೇಶ್‌ ಲಾಡ್‌ (59) ಮತ್ತು ಶ್ರೇಯಸ್‌ ಅಯ್ಯರ್‌ (30) ಅವರ ನಡುವಣ 41 ರನ್‌ ಜತೆಯಾಟವನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರ ಉತ್ತಮವಾಗಿ ಆಡಲು ವಿಫ‌ಲರಾದರು. ಇದರಿಂದಾಗಿ ಮುಂಬಯಿ 135 ರನ್‌ ಗಳಿಸುವಷ್ಟರಲ್ಲಿ ಉಳಿದ 8 ವಿಕೆಟ್‌ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿತು.

ಸಂಕ್ಷಿಪ್ತ ಸ್ಕೋರು: ಬರೋಡ 290 ಮತ್ತು 185 ; ಮುಂಬಯಿ 214 ಮತ್ತು 177 (ಸಿದ್ದೇಶ್‌ ಲಾಡ್‌ 59, ಶ್ರೇಯಸ್‌ ಅಯ್ಯರ್‌ 30, ಭಾರ್ಗವ್‌ ಭಟ್‌ 55ಕ್ಕೆ 6).

Advertisement

Udayavani is now on Telegram. Click here to join our channel and stay updated with the latest news.

Next