ಮಾಗಡಿ: ರೈತರ 14 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರೈತ ಹಿತರಕ್ಷಣಾ ವೇದಿಕೆಯಿಂದ ಫೆ.25ರಂದು ರೈತರ ನಡಿಗೆ ವಿಧಾನ ಸೌಧದ ಕಡೆಗೆ ಎಂಬ “ವಿಧಾನ ಸೌಧ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗುಡ್ಡೇಗೌಡ ತಿಳಿಸಿದರು.
ಪಟ್ಟಣದ ಶ್ರೀಸೋಮೇಶ್ವರ ಸ್ವಾಮಿ ದೇವಾಲಯದ ಬಳಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.24ರಂದು ಮಧ್ಯಾಹ್ನ 12 ಗಂಟೆಗೆಮಾಗಡಿಯಿಂದ ಪಾದಯಾತ್ರೆ ಹೊರಟು, ಗುರುವಾರದಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಗುವುದು ಎಂದರು. ಕಲ್ಕೆರೆ ಶಿವಣ್ಣ ಮಾತನಾಡಿ, ಅಧಿಕಾರಿಗಳು ರೈತರನ್ನು ಶೋಷಣೆ ಮಾಡುತ್ತಾ, ರೈತರಕೆಲಸಗಳನ್ನು ಮಾಡದೇ ಅಲೆದಾಡಿಸುತ್ತಿದ್ದಾರೆ. 30ವರ್ಷಗಳ ಹಿಂದೆ ಸರ್ಕಾರ ನೀಡಿರುವಜಮೀನುಗಳ ಖಾತೆ ಮಾಡಿಕೊಳ್ಳಲು ರೈತರುಗಳಿಂದ ಸಾದ್ಯವಾಗಿಲ್ಲ. ಹೀಗಾಗಿ, ವೇದಿಕೆ ಹೋರಾಟದ ಯಶಸ್ವಿಗೆ ಎಲ್ಲರೂ ಸಹಕಾರನೀಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಡಬಾಳ್ ಜಯರಾಮ್, ವೇದಿಕೆ ತಾಲೂಕು ಅಧ್ಯಕ್ಷ ಜುಟ್ಟನಹಳ್ಳಿ ದಿನೇಶ್, ಉಪಾಧ್ಯಕ್ಷ ರಂಗಸ್ವಾಮಯ್ಯ, ಖಜಾಂಚಿ ರಾಜ್‌ಕುಮಾರ್, ರಾಮಕೃಷ್ಣಯ್ಯ, ನಂಜೇಗೌಡ, ಮಾರಣ್ಣ, ಉಗ್ರಯ್ಯ, ಸಿದ್ದಪ್ಪಾಜಿ, ಜಾಕೀರ್‌ಹುಸೇನ್, ಅಕ್ರಂಖಾನ್, ಶಂಕರಲಿಂಗೇಗೌಡ, ಲೋಕೇಶ್,ಕುಮಾರ್, ಜಯರಾಮು ಇದ್ದರು.
ರೈತರ 14 ಬೇಡಿಕೆಗಳು :
ವ್ಯವಸಾಯ ಮಾಡುವ ರೈತರು ಸಾಲಗಾರರಾಗುತ್ತಿದ್ದಾರೆ. ತೀವ್ರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ, ಪಾದಯಾತ್ರೆ ಮೂಲಕ ವಿಧಾನಸೌಧಚಲೋ ಹಮ್ಮಿಕೊಳ್ಳಲಾಗಿದೆ. ರೈತರ ಬೇಡಿಕೆಗಳಾದ ರೈತ ಪ್ರಾಧಿಕಾರ ರಚನೆ, ಕೃಷಿ ತಿದ್ದುಪಡಿ ಕಾಯ್ದೆ ವಾಪಸ್, ರೈತ ದಿನಾಚರಣೆಯನ್ನು ವಿಧಾನ ಸೌಧ ಬ್ಯಾಕ್ವೆಟ್ ಹಾಲ್ ಮತ್ತು ಸರ್ಕಾರಿ ಕಚೇರಿಗಳಲ್ಲಿ ಆಚರಣೆ, ಎಲ್ಲಾ ಜಿಲ್ಲೆಗಳಲ್ಲಿ ರಾಗಿ, ಭತ್ತಖರೀದಿ ಕೇಂದ್ರ ಸ್ಥಾಪನೆ. ಸಾಗುವಳಿ ಚೀಟಿ ಪಡೆದ ರೈತ ಜಮೀನುಗಳಿಗೆ ಉಚಿತವಾಗಿಪೋಡಿ ಮಾಡಿಕೊಡಬೇಕು. ಜಿಲ್ಲಾಧಿಕಾರಿ ಮತ್ತು ತಾಲೂಕು ಆಧಿಕಾರಿಗಳು ತಿಂಗಳಲ್ಲಿ ಒಂದು ದಿನ ರೈತರ ಸಂಪರ್ಕ ಕಾರ್ಯಕ್ರಮ ಆಯೋಜನೆ ಮಾಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಹೀಗೆ ಒಟ್ಟು 14 ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದು ರೈತರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗುಡ್ಡೇಗೌಡ ತಿಳಿಸಿದರು.