Advertisement

ಜೋಡೆತ್ತು ಉಳುಮೆಗೆ ಜಯ

10:45 PM Dec 09, 2019 | Lakshmi GovindaRaj |

ಹಾವೇರಿ: ತ್ರಿಪದಿ ಕವಿ ಸರ್ವಜ್ಞನ ತವರು ಖ್ಯಾತಿಯ ಹಿರೇಕೆರೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಕೌರವ’ನ ಶಕ್ತಿಯೂ ಸೇರ್ಪಡೆಯಾದಂತಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರದ ಉಪಚುನಾವಣೆಯಲ್ಲಿ ಜೋಡೆತ್ತಿಗೆ ಮತದಾರರು ಕೈ ಹಿಡಿದ್ದಾರೆ.

Advertisement

ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ 85562 ಮತ ಪಡೆದು ಕಾಂಗ್ರೆಸ್‌ನ ಬಿ.ಎಚ್‌.ಬನ್ನಿಕೋಡ ವಿರುದ್ಧ 29,076 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಕಾಂಗ್ರೆಸ್‌ನ ಬನ್ನಿಕೋಡ 56495 ಮತ ಪಡೆದಿದ್ದಾರೆ. ಇದು ಹಿರೇಕೆರೂರು ಇತಿಹಾಸದಲ್ಲಿಯೇ ಅತಿ ದೊಡ್ಡ ಅಂತರದ ಗೆಲುವು ಎನಿಸಿಕೊಂಡಿದೆ.

ಅನರ್ಹತೆ ದೂರವಾಗಿಸಿಕೊಂಡ ಕೌರವ: ಬಿ.ಸಿ. ಪಾಟೀಲ ಕಳೆದ ಒಂದೂವರೆ ವರ್ಷದ ಹಿಂದಷ್ಟೇ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕೇವಲ 555 ಮತಗಳ ಅಂತರದಿಂದ ಗೆದ್ದಿದ್ದರು. ಬಳಿಕ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಕೈ ಜೋಡಿಸಿ, ಅನರ್ಹತೆಯ ಹಣೆಪಟ್ಟಿ ಕಟ್ಟಿಕೊಳ್ಳುವಂತಾಗಿತ್ತು. ಈಗ ಉಪ ಚುನಾವಣೆಯಲ್ಲಿ ಮರು ಆಯ್ಕೆಯಾಗುವ ಮೂಲಕ ಕೌರವ’ನಿಗೆ ಅಂಟಿದ್ದ ಅನರ್ಹತೆ’ ದೂರವಾಗುವ ಜತೆಗೆ ಜಿಲ್ಲೆ ಯನ್ನು ಕಾಂಗ್ರೆಸ್‌ ಮುಕ್ತ ಗೊಳಿಸಿದ ಕೀರ್ತಿಯೂ ಪಡೆದಂತಾಗಿದೆ.

ಜೋಡೆತ್ತಿಗೆ ವಿಜಯ ಮಾಲೆ: ಈ ಉಪಚುನಾವಣೆ ಉಳಿದೆಲ್ಲ ಚುನಾವಣೆ ಗಳಿಗಿಂತ ಭಿನ್ನವಾಗಿತ್ತು. ಏಕೆಂದರೆ ಹಲವು ವರ್ಷಗಳ ಕಾಲ ಇಲ್ಲಿ ರಾಜಕೀಯ ಬದ್ಧ ವೈರಿಗಳಾಗಿದ್ದವರು ಈ ಬಾರಿ ಒಂದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇಬ್ಬರೂ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆಯಂತೆ ಅಕ್ಷರಶಃ ಜೋಡೆತ್ತುಗಳ ರೀತಿಯಲ್ಲೇ ಚುನಾವಣೆ ಕೆಲಸ ಮಾಡಿ ವಿಜಯ ಮಾಲೆ ಧರಿಸಿಕೊಂಡರು.

ಒಳ ಹೊಡೆತವಿಲ್ಲ: ಬಿ.ಸಿ.ಪಾಟೀಲರಿಗೆ ಮಾಜಿ ಶಾಸಕ ಯು.ಬಿ. ಬಣಕಾರ ಹಾಗೂ ಬೆಂಬಲಿಗರು ಎಲ್ಲಿ ಒಳಹೊಡೆತ’ ನೀಡುತ್ತಾರೋ ಎಂಬ ಆತಂಕ ಸ್ವತಃ ಯಡಿಯೂರಪ್ಪ ಆದಿಯಾಗಿ ಎಲ್ಲ ಮುಖಂಡರನ್ನು ಕಾಡುತ್ತಿತ್ತು. ಆದರೆ, ಯು.ಬಿ. ಬಣಕಾರ ಬಿ.ಸಿ. ಪಾಟೀಲರ ಹೆಜ್ಜೆ ಹೆಜ್ಜೆಗೂ ಸಾಥ್‌ ನೀಡಿ ಪ್ರಾಮಾಣಿಕ ಬೆಂಬಲ ಸೂಚಿಸಿದ್ದು, ಒಳ ಹೊಡೆತದ ಆಲೋ-ಚನೆಗೆ ಆಸ್ಪದ ನೀಡದೆ ಇರುವುದು ಬಿ.ಸಿ. ಪಾಟೀಲ ಗೆಲುವು ಸುಲಭ ಸಾಧ್ಯವಾಯಿತು.

Advertisement

ಗೆದ್ದವರು
ಬಿ.ಸಿ.ಪಾಟೀಲ್‌ (ಬಿಜೆಪಿ)
ಪಡೆದ ಮತ: 85562
ಗೆಲುವಿನ ಅಂತ ರ‌: 29,076

ಸೋತವರು
ಬನ್ನಿಕೋಡ (ಕಾಂಗ್ರೆಸ್‌)
ಪಡೆದ ಮತ: 56495

ದೇವೇಂದ್ರಪ್ಪ(ಉ.ಕ.ಪ್ರಜಾ ಪ್ರಗತಿ ಪಕ್ಷ)
ಪಡೆದ ಮತ: 597

ಗೆದ್ದದ್ದು ಹೇಗೆ?
-ಮಾಜಿ ಶಾಸಕ ಯು.ಬಿ.ಬಣಕಾರ- ಬಿ.ಸಿ.ಪಾಟೀಲ ಜೋಡೆತ್ತುಗಳಂತೆ ಕೆಲಸ ಮಾಡಿದ್ದು

-ಹಿರೇಕೆರೂರು ಕ್ಷೇತ್ರದ ಅಭಿವೃದ್ಧಿಗೆ ಅನುದಾನ, ಬಿ.ಸಿ.ಪಾಟೀಲರಿಗೆ ಸಚಿವ ಸ್ಥಾನ ಭರವಸೆ

-ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಬೇಕೆಂಬ ಭಾವನೆ

ಸೋತದ್ದು ಹೇಗೆ?
-ಬಿ.ಸಿ.ಪಾಟೀಲ – ಮಾಜಿ ಶಾಸಕ ಯು.ಬಿ. ಬಣಕಾರ ಒಂದಾಗಿ ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ನಡೆಸಿದ್ದು

-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರತಾಗಿ ಉಳಿದವರಾರೂ ಪ್ರಭಾವ ಬೀರುವಂತಹ ಪ್ರಚಾರ ಮಾಡದೆ ಇರುವುದು ವಯಸ್ಸಿನ ಕಾರಣದಿಂದ ಕಾಂಗ್ರೆಸ್‌ ಅಭ್ಯರ್ಥಿ

-ಬಿ.ಎಚ್‌.ಬನ್ನಿಕೋಡ ಚುರುಕಿನ ಪ್ರಚಾರ ಕೈಗೊಳ್ಳದೇ ಇರುವುದು ಹಾಗೂ ಯುವಜನರನ್ನು ಆಕರ್ಷಿಸದೆ ಇರುವುದು

ಅನರ್ಹತೆ ಆರೋಪಕ್ಕೆ ಜನತಾ ಕೋರ್ಟ್‌ನಲ್ಲಿ ಅರ್ಹತೆ ತೀರ್ಪು ಸಿಕ್ಕಿದೆ. ಬಣಕಾರ, ನಾನು ಒಂದಾದ ಪರಿಣಾಮ ಗೆಲುವು ಸುಲಭವಾಯಿತು. ಕ್ಷೇತ್ರದಲ್ಲಿಗ ಅಭಿವೃದ್ಧಿ ಪರ್ವ ಶುರುವಾಗಲಿದೆ.
-ಬಿ.ಸಿ.ಪಾಟೀಲ, ಬಿಜೆಪಿ ವಿಜೇತ ಅಭ್ಯರ್ಥಿ

ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪಿಗೆ ತಲೆಬಾಗಲೇಬೇಕು. ಜನರ ತೀರ್ಪು ಒಪ್ಪಿಕೊಳ್ಳುತ್ತೇನೆ. ಆದರೆ, ಚುನಾವಣೆಯಲ್ಲಿ ಕಾನೂನಿನ ಪ್ರಕಾರ ಏನು ಅಕ್ರಮ ಮಾಡ ಬಾರದೋ ಅದೆಲ್ಲವನ್ನೂ ಬಿಜೆಪಿ ಮಾಡಿ ಗೆದ್ದಿದೆ.
-ಬಿ.ಎಚ್‌.ಬನ್ನಿಕೋಡ, ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next