Advertisement

ಕಾನೂನು ಸಮರದಲ್ಲಿ ಜಯ ನಿಶ್ಚಿತ: ಸುಧಾಕರ್‌

09:33 PM Aug 29, 2019 | Team Udayavani |

ಚಿಕ್ಕಬಳ್ಳಾಪುರ: ಶಾಸಕ ಸ್ಥಾನದಿಂದ ನಮ್ಮನ್ನು ಅನರ್ಹಗೊಳಿಸುವ ಮೂಲಕ ಅನೈತಿಕವಾಗಿ ಕೆಟ್ಟ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ವಿರುದ್ಧ ವಾಗ್ಧಾಳಿ ನಡೆಸಿದ ಶಾಸಕ ಡಾ.ಕೆ.ಸುಧಾಕರ್‌, ಕಾನೂನು ಸಮರದಲ್ಲಿ ನಮಗೆ ಜಯ ಸಿಗುವ ವಿಶ್ವಾಸವಿದೆ ಎಂದರು.

Advertisement

ನಗರದ ಖಾಸಗಿ ಬಸ್‌ ನಿಲ್ದಾಣದಲ್ಲಿ ಗುರುವಾರ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ವತಿಯಿಂದ ಹಮ್ಮಿಕೊಂಡಿದ್ದ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ 154 ಸ್ತ್ರೀಶಕ್ತಿ ಸಂಘಗಳಿಗೆ 5.74 ಕೋಟಿ ರೂ. ಸಾಲದ ಚೆಕ್‌ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕ್ಷೇತ್ರಗಳ ಅಭಿವೃದ್ಧಿ ದೃಷ್ಟಿಯಿಂದ ಚರ್ಚೆ ನಡೆಸಿ ರಾಜೀನಾಮೆ ನೀಡಿದ್ದೇವೆ. ಆದರೆ ಸ್ಪೀಕರ್‌ ಆಗಿದ್ದ ರಮೇಶ್‌ ಕುಮಾರ್‌, ನಮ್ಮ ವಿರುದ್ಧ ಅನೈತಿಕವಾಗಿ ಅನರ್ಹಗೊಳಿಸುವ ತೀರ್ಮಾನ ಕೈಗೊಂಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

ಕಾರ್ಯಕರ್ತರ ತೀರ್ಮಾನಕ್ಕೆ ಬದ್ಧ: ಇತ್ತೀಚೆಗೆ ಕ್ಷೇತ್ರಕ್ಕೆ ಆಗಮಿಸಿದ್ದ ಕಾಂಗ್ರೆಸ್‌ನ ಸತ್ಯ ಶೋಧನಾ ಸಮಿತಿ ಎದುರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲಿಗೆ ಸುಧಾಕರ್‌, ಬಿಜೆಪಿ ಪರ ಕೆಲಸ ಮಾಡಿದ್ದೇ ಕಾರಣ ಎಂಬುದರ ಮಾಹಿತಿ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಅಂತಹ ಕೀಳು ಮಟ್ಟದ ರಾಜಕಾರಣ ಮಾಡುವುದಿಲ್ಲ. ಯಾವುದೇ ಕಾರಣಕ್ಕೂ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳದೇ ಕಾರ್ಯಕರ್ತರ ತೀರ್ಮಾನದಂತೆ ನಡೆದುಕೊಳ್ಳುವೆ ಎಂದರು.

ಮಹಿಳೆಯರ ಸಬಲೀಕರಣ ಅಗತ್ಯ: ಇದಕ್ಕೂ ಮೊದಲು ಡಿಸಿಸಿ ಬ್ಯಾಂಕ್‌ ವತಿಯಿಂದ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ವಿತರಿಸಿ ಮಾತನಾಡಿದ ಅವರು, ಮಹಿಳೆಯರು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಆರ್ಥಿಕ ಸಬಲೀಕರಣ ಅಗತ್ಯ ಎಂದರು. ಮೈತ್ರಿ ಸರ್ಕಾರದಲ್ಲಿ ಮೆಡಿಕಲ್‌ ಕಾಲೇಜು ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಕನಸಿಗೆ ಸ್ಪಂದನೆ ಸಿಗಲಿಲಿಲ್ಲ. ಸಾಕಷ್ಟು ಅವಮಾನ, ಆತಂಕ ಎದುರಿಸಿದ್ದೇನೆ. ನನ್ನ ರಾಜಕೀಯ ನಿರ್ಧಾರ ಅಚಲವಾದದ್ದು ಎಂದರು.

Advertisement

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಮೋಹನ್‌ ರೆಡ್ಡಿ, ಎಸ್‌.ಕೆ.ಎಲ್.ದ್ಯಾವಣ್ಣ, ವೇದ ಸುದರ್ಶನರೆಡ್ಡಿ, ತಾಪಂ ಅಧ್ಯಕ್ಷ ರಾಮಸ್ವಾಮಿ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ನಾಗೇಶ್‌, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಆವುಲರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷ ಅಪ್ಪಾಲು ಮಂಜು, ಲೀಲಾವತಿ ಶ್ರೀನಿವಾಸ್‌, ಮುನಿಕೃಷ್ಣ, ಮುಖಂಡರಾದ ಮರಳಕುಂಟೆ ಕೃಷ್ಣಮೂರ್ತಿ, ಚನ್ನಕೃಷ್ಣಾರೆಡ್ಡಿ, ಸತೀಶ್‌ ಸ್ವಾಮಿ, ಸುಬ್ಟಾರೆಡ್ಡಿ, ನಾರಾಯಣಸ್ವಾಮಿ, ಗಂಗಾಧರ್‌, ವೆಂಕಟೇಶ್‌, ರಾಮ್‌ ಕುಮಾರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಗಮನ ಸೆಳೆದ ಬಿಗಿ ಪೊಲೀಸ್‌ ಭದ್ರತೆ: ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿರುವ ಅನರ್ಹ ಶಾಸಕ ಡಾ.ಕೆ.ಸುಧಾಕರ್‌ ಸಮ್ಮುಖದಲ್ಲಿ ಖಾಸಗಿ ಬಸ್‌ ನಿಲ್ದಾಣದಲ್ಲಿ ಡಿಸಿಸಿ ಬ್ಯಾಂಕ್‌ ವತಿಯಿಂದ ಸ್ತ್ರೀಶಕ್ತಿ ಸಂಘಗಳಿಗೆ ಆಯೋಜಿಸಿದ್ದ ಸಾಲ ವಿತರಣೆ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್‌ ಸರ್ಪಗಾವಲು ಆಯೋಜಿಸಿದ್ದು ಮಾತ್ರ ಸಾಕಷ್ಟು ಗಮನ ಸೆಳೆಯಿತು.

ಇಡೀ ಕಾರ್ಯಕ್ರಮ ಪೊಲೀಸರ ಭದ್ರತೆಯಲ್ಲಿ ನಡೆಯುವಂತೆ ಭಾಸವಾಯಿತು. ಅಷ್ಟೊಂದು ಪ್ರಮಾಣದಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಿದ್ದು ಎದ್ದು ಕಾಣುತ್ತಿತ್ತು. ಅನರ್ಹಗೊಂಡಿರುವ ಶಾಸಕ ಡಾ.ಕೆ.ಸುಧಾಕರ್‌ ಅವರಿಂದ ಡಿಸಿಸಿ ಬ್ಯಾಂಕ್‌ ಚೆಕ್‌ಗಳನ್ನು ವಿತರಿಸಬಾರದು ಎಂದು ಕಾಂಗ್ರೆಸ್‌ ಮುಖಂಡರು ಆಗ್ರಹಿಸಿದ್ದರು. ಅಲ್ಲದೇ ಸುಧಾಕರ್‌ರಿಂದ ಚೆಕ್‌ ವಿತರಿಸಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.

ಚೆಕ್‌ ಜೊತೆಗೆ ಸೀರೆ ವಿತರಣೆ: ಸಾಲದ ಚೆಕ್‌ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದ ಅನರ್ಹ ಶಾಸಕ ಡಾ.ಕೆ.ಸುಧಾಕರ್‌, ಬರೋಬ್ಬರಿ 500 ಕ್ಕೂ ಹೆಚ್ಚು ಮಹಿಳೆಯರಿಗೆ ಕಾರ್ಯಕ್ರಮದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಅರಿಶಿನ, ಕುಂಕಮ ನೀಡುವ ನೆಪದಲ್ಲಿ ರೇಷ್ಮೆ ಸೀರೆಗಳನ್ನು ವಿತರಿಸಿದ್ದು ಚರ್ಚೆಗೆ ಗ್ರಾಸವಾಯಿತು. ಕೆಲವರಿಗೆ ಕಳಪೆ ಗುಣಮಟ್ಟದ ಸೀರೆಗಳ ವಿತರಣೆ ಆಗಿರುವ ಆರೋಪ ಕೇಳಿ ಬಂತು. ಆದರೆ ಸೀರೆ ವಿತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ.ಕೆ.ಸುಧಾಕರ್‌, ನಾನು ಪ್ರತಿ ವರ್ಷ ಕ್ಷೇತ್ರದ ಅಕ್ಕ, ತಂಗಿಯರಿಗೆ ಅರಿಶಿನ, ಕುಂಕಮ ಜೊತೆಗೆ ಸೀರೆ ವಿತರಿಸುವುದು ವಾಡಿಕೆ, ಟೀಕೆ ಮಾಡುವರು ಮಾಡಲಿ ಎಂದು ಗೇಲಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next