ಗೋಕಾಕ: ಕೋವಿಡ್ ಮಹಾಮಾರಿ ಯಿಂದಾಗಿ ಇಡೀ ಜಗತ್ತು ಸಂಕಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್ ಎಂಬ ಗಟ್ಟಿ ನಿರ್ಧಾರ ತಾಳಿ ದೇಶವನ್ನು ಗಂಡಾಂತರದಿಂದ ಪಾರು ಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ದೇಶದ ಜನತೆ ಪ್ರಧಾನಿ ಅವರನ್ನು ಕೊಂಡಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ನಗರದ ಸಮುದಾಯ ಭವನದಲ್ಲಿ ತಾಲೂಕಿನ ಸಹಕಾರ ಸಂಘಗಳು, ಸೌಹಾರ್ದ ಸಹಕಾರಿಗಳು ಮತ್ತು ಬೆಳಗಾವಿ ಹಾಲು ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೋವಿಡ್ ವಾರಿಯರ್ಸ್ ಗೆ ಅಭಿನಂದನಾ ಪತ್ರ ಹಾಗೂ ಪ್ರೋತ್ಸಾಹಧನ ಚೆಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ಕೋವಿಡ್ ವೈರಸ್‌ನ ಕರಾಳ ಛಾಯೆ ಎಲ್ಲೆಡೆ ಹರಡಿದ್ದರೂ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ-ಆಶಾ ಕಾರ್ಯಕರ್ತೆಯರ ಸಮಯೋಚಿತ ಕಾರ್ಯಗಳಿಂದ ಹತೋಟಿಗೆ ಬಂದಿದೆ. ಸೋಂಕು ತಗುಲಿದವರು ಗುಣಮುಖರಾಗಿ ಹೊರಬರುತ್ತಿರುವುದು ಸಮಾಧಾನಕರ ಸಂಗತಿ. ಕೊರೊನಾ ಹೋರಾಟದಲ್ಲಿ ಭಾರತಕ್ಕೆ ಜಯ ಖಂಡಿತ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋವಿಡ್ ಸಂಕಷ್ಟಎದುರಿಸುವಲ್ಲಿ ಸಂಘ-ಸಂಸ್ಥೆಗಳ ಪಾತ್ರ ಮಹತ್ವದಾಗಿದೆ. ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಕೆಎಂಎಫ್ ಸಂಸ್ಥೆ ಉಚಿತವಾಗಿ ನಾಡಿನ ಜನತೆಗೆ ಹಾಲನ್ನು ಪೂರೈಸಿ, 6 ಕೋಟಿ ರೂ. ದೇಣಿಗೆಯಾಗಿ ನೀಡಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರಿ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಡಾ| ಸಂಜಯ ಹೊಸಮಠ, ನಿರ್ದೇಶಕ ತಮ್ಮಣ್ಣ ಕೆಂಚರೆಡ್ಡಿ, ಕೆಎಂಎಫ್ ಬೆಳಗಾವಿ ನಿರ್ದೇಶಕರಾದ ಮಲ್ಲು ಪಾಟೀಲ, ಆರ್.ಕೆ. ಬಂಡಿ, ವ್ಯವಸ್ಥಾಪಕ ನಿರ್ದೇಶಕ ಯುಭೆಖಾನ, ಸಹಕಾರ ಸಂಘಗಳ ಜಂಟಿ ನಿಬಂಧಕ ಜಿ.ಎಂ. ಪಾಟೀಲ, ಉಪನಿಬಂಧಕ ಕೆ.ಐ. ಶ್ರೀನಿವಾಸ, ಸಹಾಯಕ ನಿಬಂಧಕ ಎನ್.ಎನ್. ಸರಾಫ, ಸಹಕಾರ ಅಭಿವೃದ್ಧಿ ಅಧಿ ಕಾರಿ ಬಿ.ಕೆ. ಗೋಖಲೆ ಇದ್ದರು.
ಸಹಕಾರಿ ಸಂಘಗಳ ಹಿರಿಯ ನಿರೀಕ್ಷ ಎಸ್.ಬಿ. ಬಿರಾದಾರ ಪಾಟೀಲ ಸ್ವಾಗತಿಸಿ, ವಂದಿಸಿದರು.