ಕೋಲ್ಕತಾ : ಪಶ್ಚಿಮ ಬಂಗಾಳದ ಬಿರ್ಭೂಮ್‌ನಲ್ಲಿ ಸಜೀವ ದಹನ ಮಾಡುವ ಮೊದಲು ಸಂತ್ರಸ್ತರನ್ನು ಕೆಟ್ಟದಾಗಿ ಥಳಿಸಲಾಗಿದೆ ಎಂದು ಶವಪರೀಕ್ಷೆ ವರದಿಯಲ್ಲಿ ಬಹಿರಂಗವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಕನಿಷ್ಠ 20 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನಿರ್ಲಕ್ಷ್ಯದ ಆಧಾರದ ಮೇಲೆ ಹಲವು ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕ ಸ್ವಯಂಸೇವಕರನ್ನು ಸಸ್ಪೆಂಡ್ ಮಾಡಲಾಗಿದೆ.
ಬಿರ್ಭೂಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ಮಾರ್ಚ್ 21 ರಂದು ಸಂಜೆ ಸ್ಥಳೀಯ ಟಿಎಂಸಿ ನಾಯಕನ ಹತ್ಯೆಯ ಬಳಿಕ ಹಿಂಸಾಚಾರ ಭುಗಿಲೆದ್ದು, ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರನ್ನು ಸಜೀವ ದಹನ ಮಾಡಿ ಹತ್ಯಾಕಾಂಡ ನಡೆಸಲಾಗಿತ್ತು.ಘಟನಾ ಸ್ಥಳಕ್ಕೆ ಸಿಎಂ ಮಮತಾ ಬ್ಯಾನರ್ಜಿ ಅವರು ಭೇಟಿ ನೀಡಲಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಭೇಟಿಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಮ್‌ಪುರಹಟ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೆಲಿಕಾಪ್ಟರ್ ಇಳಿಯುವ ಹೆಲಿಪ್ಯಾಡ್ ಸುತ್ತ ಸಿಸಿಟಿವಿಗಳನ್ನು ಸ್ಥಾಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಎಂ ಬ್ಯಾನರ್ಜಿ ಅವರು ಗಾಯಾಳುಗಳನ್ನು ಭೇಟಿ ಮಾಡಲು ರಾಂಪುರಹತ್ ಆಸ್ಪತ್ರೆಗೆ ಭೇಟಿ ನೀಡಬಹುದು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಮತ್ತು ಬಿಜೆಪಿಯ ಐದು ಸದಸ್ಯರ ಕೇಂದ್ರ ತಂಡವೂ ಬೊಗ್ಟುಯ್‌ಗೆ ಭೇಟಿ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹತ್ಯಾಕಾಂಡ “ಘೋರ” ಎಂದು ಬಣ್ಣಿಸಿದ್ದಾರೆ.
ತಪ್ಪಿತಸ್ಥರನ್ನು ಕ್ಷಮಿಸಬಾರದು ಎಂದು ಹೇಳಿದ್ದು, ಪಕ್ಷಕ್ಕೆ ಸಂಬಂಧಿಸಿದವರಾದರೂ ಯಾವುದೇ ಮುಲಾಜಿಲ್ಲದೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬ್ಯಾನರ್ಜಿ ಪ್ರತಿಜ್ಞೆ ಮಾಡಿದ್ದಾರೆ.