ಮಡಿಕೇರಿ: ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡು ನಿರಾಶ್ರಿತರಾಗಿರುವ ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ಮಾದರಿ ಮನೆಗಳು ಇದೀಗ ಕಳ್ಳರಿಗೆ ವರವಾಗಿದೆ. ಅಲ್ಲದೆ, ಪುಂಡ ಪೋಕರಿಗಳ ಆಶ್ರಯತಾಣವಾಗಿ ಮಾರ್ಪಟ್ಟಿದೆ.
ಮಡಿಕೇರಿ ಸಮೀಪ ಪ್ರಾದೇಶಿಕ ಸಾರಿಗೆ ಕಚೇರಿಯ ಬಳಿ ಮಳೆಹಾನಿ ಸಂತ್ರಸ್ತರಿಗಾಗಿ ಕಳೆದ ವರ್ಷ ಮಾದರಿ ಮನೆಗಳನ್ನು ನಿರ್ಮಿಸಲಾಗಿತ್ತು. ಮನೆಗಳ ನಿರ್ಮಾಣ ಕಾರ್ಯವನ್ನು ಯಾವ ಸಂಸ್ಥೆಗೆ ನೀಡಬೇಕೆನ್ನುವ ಬಗ್ಗೆ ಜಿಲ್ಲಾಡಳಿತ ಕಾರ್ಯೋನ್ಮುಖವಾದಾಗ ಕೆಲವು ಗುತ್ತಿಗೆ ಸಂಸ್ಥೆಗಳು ಮಾದರಿ ಮನೆಗಳನ್ನು ನಿರ್ಮಿಸಿ ಗುತ್ತಿಗೆ ಪ್ರಕ್ರಿಯೆಯ ಸ್ಪರ್ಧೆಯಲ್ಲಿ ತೊಡಗಿದ್ದವು.
ಈ ರೀತಿ ನಿರ್ಮಾಣಗೊಂಡ ಮನೆಗಳು ಇದೀಗ ಅನಾಥವಾಗಿರುವುದು ಕಳ್ಳರಿಗೆ ವರವಾಗಿದೆ. ಇದೀಗ ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ಮುರಿದು ಹೊತ್ತೂಯ್ದಿರುವ ಕಳ್ಳರು, ವಿದ್ಯುತ್ ಬಲ್ಬ್, ಸ್ವಿಚ್, ನೀರಿನ ಪೈಪ್‌ಗಳು ಸೇರಿದಂತೆ ಇನ್ನಿತರ ಪರಿಕರಗಳನ್ನು ಕದ್ದೊಯ್ದಿದ್ದಾರೆ.
ಸಂಜೆಯಾಗುತ್ತಲೇ ಈ ಪ್ರದೇಶ ನಿರ್ಜನವಾಗುವುದರಿಂದ ಮಾದರಿ ಮನೆ ಗಳಲ್ಲಿ ಆಶ್ರಯ ಪಡೆಯುವ ಪುಂಡರು, ದುಶ್ಚಟಗಳ ದಾಹ ತೀರಿಸಿಕೊಳ್ಳುತ್ತಿದ್ದಾರೆ. ಮದ್ಯಪಾನ, ಧೂಮಪಾನ, ಗಾಂಜಾ ಸೇವನೆಯಂತಹ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಇಲ್ಲಿ ಅಕ್ರಮ ನಡೆಯುವ ಬಗ್ಗೆಯೂ ಸಾರ್ವಜನಿಕರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಮಹಾಮಳೆಯಿಂದ ಎಲ್ಲವನ್ನೂ ಕಳೆದುಕೊಂಡು ಆಶ್ರಯಕ್ಕಾಗಿ ಎದುರು ನೋಡುತ್ತಿರುವ ಸಂತ್ರಸ್ತರು, ಅಸಹಾಯಕ ಸ್ಥಿತಿಯಲ್ಲಿ ಬಾಡಿಗೆ ಮನೆ ಹಾಗೂ ನೆಂಟರಿಷ್ಟರ ಮನೆಯಲ್ಲೇ ದಿನದೂಡುತ್ತಿದ್ದಾರೆ. ತುರ್ತಾಗಿ ಆಶ್ರಯ ಬೇಕಾದವರಿಗೆ ತಾತ್ಕಾಲಿಕ ವಾಗಿಯಾದರೂ ಮಾದರಿ ಮನೆಗಳನ್ನು ಬಿಟ್ಟು ಕೊಟ್ಟಿದ್ದರೆ ಪುಂಡರ ಹಾವಳಿಯನ್ನು ತಪ್ಪಿಸಬಹುದಾಗಿತ್ತು. ಆದರೆ, ಅರ್ಹರಿಗೆ ಸಿಗದ ಮನೆಗಳು ಅನರ್ಹರ ಸ್ವರ್ಗವಾಗಿ ಮಾರ್ಪಟ್ಟಿರುವುದು ಮಾತ್ರ ದುರಂತ.