Advertisement

ಉಪರಾಷ್ಟ್ರಪತಿ ಹುದ್ದೆಗೆ ಡಾ|ಸೇಡಂ ಎನ್‌ಡಿಎ ಅಭ್ಯರ್ಥಿ?

03:15 AM Jul 09, 2017 | Team Udayavani |

ಕಲಬುರಗಿ: ಆಗಸ್ಟ್‌ 5ರಂದು ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದ್ದು, ಈ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿ ರಾಜ್ಯಸಭಾ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ ಅವರ ಹೆಸರು ಕೇಳಿ ಬರುತ್ತಿದೆ.

Advertisement

ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಗೆ ಉತ್ತರ ಭಾರತದ ಅಭ್ಯರ್ಥಿಯನ್ನು ಎನ್‌ಡಿಎ ಮೈತ್ರಿಕೂಟ ಅಂತಿಮಗೊಳಿಸಿದ್ದರಿಂದ ಉಪರಾಷ್ಟ್ರಪತಿ ಆಯ್ಕೆ ವೇಳೆ ದಕ್ಷಿಣ ಭಾರತದವರಿಗೆ ಆದ್ಯತೆ ನೀಡಬಹುದು ಎನ್ನಲಾಗುತ್ತಿದೆ. ಅದರಲ್ಲೂ ಕರ್ನಾಟಕದ ಸಮರ್ಥರೊಬ್ಬರು ಅಭ್ಯರ್ಥಿ ಆಗಲಿದ್ದಾರೆ ಎನ್ನುವ ಮಾತು ದಟ್ಟವಾಗಿ ಕೇಳಿ ಬರುತ್ತಿದೆ.

ಲಾಬಿ ಮಾಡಿದವರಲ್ಲ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರ ಸಂಪರ್ಕ ಹೊಂದಿರುವ ಸರಳ ವ್ಯಕ್ತಿತ್ವದ ರಾಜ್ಯಸಭಾ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಡಾ| ಸೇಡಂ ಅವರು ಯಾವುದೇ ಹುದ್ದೆಗೂ ಲಾಬಿ ಮಾಡಿದವರಲ್ಲ. ವಿಧಾನ ಪರಿಷತ್‌ ಸದಸ್ಯರಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ, ಸಂಸತ್‌ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಸೇಡಂ, ರಾಜಕೀಯ ಸಂಪರ್ಕದಿಂದ ದೂರ ಇರುವ ನಿಲುವು ತಳೆದು 2009ರಲ್ಲಿ 10 ಲಕ್ಷ ಜನರನ್ನು ಸೇರಿಸಿ, “ಕಲಬುರಗಿ ಕಂಪು’ ಎಂಬ ಐತಿಹಾಸಿಕ ಕಾರ್ಯಕ್ರಮ ಆಯೋಜಿಸಿ ರಾಷ್ಟ್ರದ ಗಮನ ಸೆಳೆದಿದ್ದರು. ಆಕಸ್ಮಿಕ ಎನ್ನುವಂತೆ 2012ರಲ್ಲಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.

ರಾಜ್ಯಸಭಾ ಸದಸ್ಯರಾದರೂ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೆ ವಿಕಾಸ ಅಕಾಡೆಮಿ ಮೂಲಕ ಹೈದ್ರಾಬಾದ್‌ – ಕರ್ನಾಟಕ ಭಾಗದ ಶೈಕ್ಷಣಿಕ ಹಾಗೂ ಪರಿಸರ ಜತೆಗೆ ಮಾನವ ಅಭಿವೃದ್ಧಿ ಸೂಚ್ಯಂಕ ಹೆಚ್ಚಿಸುವ ನಿಟ್ಟಿನಲ್ಲಿ ತಮ್ಮದೇ ಆದ ಕಾರ್ಯಸೂಚಿ ಹೊಂದಿ ಕಾರ್ಯಕ್ರಮಗಳನ್ನು ನಿರೂಪಿಸುತ್ತಾ ಮುನ್ನಡೆದಿದ್ದಾರೆ.

ಪ್ರಧಾನಿ ಮೋದಿ ಸಂಪರ್ಕ
ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠಾವಂತ ಕಾರ್ಯಕರ್ತರಾಗಿರುವ ಸೇಡಂ ಅವರು ರಾಷ್ಟ್ರಮಟ್ಟದ ನಾಯಕರ ಜತೆಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಕಳೆದ ಬಾರಿ ಗುಜರಾತ್‌ ಚುನಾವಣೆ ಸಂದರ್ಭಗಳಲ್ಲಿ ನರೇಂದ್ರ ಮೋದಿ ಅವರೊಂದಿಗೆ ಎರಡು ವಾರ ಪ್ರಚಾರದಲ್ಲಿ ಭಾಗವಹಿಸಿದ್ದರು. ವಾಗ್ಮಿಯೂ ಆಗಿರುವ ಸೇಡಂ ಅವರ ಹೆಸರು ಉಪರಾಷ್ಟ್ರಪತಿ ಹುದ್ದೆಗೆ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಡಾ| ಬಸವರಾಜ ಪಾಟೀಲ ಸೇಡಂ ಉಪರಾಷ್ಟ್ರಪತಿಯಾಗಲಿ ಎನ್ನುವ ನಿಟ್ಟಿನಲ್ಲಿ ಚರ್ಚೆಯೂ ನಡೆಯುತ್ತಿದೆ. ಹೈ.ಕ. ಭಾಗದಿಂದ ಹಲವರು ಒತ್ತಾಯವನ್ನೂ ಮಾಡಿದ್ದಾರೆ. ದಿಢೀರನೆ ರಾಜ್ಯಸಭಾ ಸದಸ್ಯರಾದಂತೆ ಡಾ| ಸೇಡಂ ಉಪರಾಷ್ಟ್ರಪತಿ ಅಭ್ಯರ್ಥಿಯೂ ಆಗಲಿದ್ದಾರೆ ಎನ್ನಲಾಗುತ್ತಿದೆ.

Advertisement

ನಾನಂತೂ ಉಪರಾಷ್ಟ್ರಪತಿ ಹುದ್ದೆ ಬಯಸಿಲ್ಲ. ಅದಕ್ಕಾಗಿ ಲಾಬಿಯನ್ನೂ ಮಾಡಲ್ಲ. ನಾನೇ ಒಂದು ಹೆಸರನ್ನು ಸೂಚಿಸಿದ್ದೇನೆ. ಮಾಜಿ ರಾಷ್ಟ್ರಪತಿ ಡಾ| ಎಪಿಜೆ ಅಬ್ದುಲ್‌ ಕಲಾಂ ಅವರೊಂದಿಗೆ ಒಡನಾಟ ಹೊಂದಿದ್ದ ರಾಜ್ಯದವರೊಬ್ಬರ ಹೆಸರನ್ನೂ ಪ್ರಧಾನಿಗಳೊಂದಿಗೆ ಮಾತನಾಡಿ ಹೇಳಿರುವೆ. ಪ್ರಸ್ತುತ ರಾಷ್ಟ್ರಪತಿ ಚುನಾವಣೆಯಲ್ಲಿ ರಾಷ್ಟ್ರಪತಿ ಹುದ್ದೆಯ ಘನತೆ – ಗೌರವದ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ರಾಷ್ಟ್ರಪತಿ ಅಭ್ಯರ್ಥಿಗಳ ಜಾತಿ ಬಗ್ಗೆ ಚರ್ಚೆ ಆಗುತ್ತಿರುವುದು ಬೇಸರ ತಂದಿದೆ.
– ಡಾ| ಬಸವರಾಜ ಪಾಟೀಲ ಸೇಡಂ, ರಾಜ್ಯಸಭಾ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next