ಬೆಂಗಳೂರು: ಜನವರಿ 29ರಂದು ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿರುವುದರಿಂದ ಮೂರು ರಾಜಕೀಯ ಪಕ್ಷಗಳಲ್ಲಿ ಆಕಾಂಕ್ಷಿಗಳ ಹೆಸರು ಚಾಲ್ತಿಗೆ ಬಂದಿವೆ.
ಬಿಜೆಪಿ ಹಾಗೂ ಜೆಡಿಎಸ್ ಸಭಾಪತಿ ಪದಚ್ಯುತಿಗೆ ನೋಟಿಸ್ ನೀಡಿರುವುದರಿಂದ ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯಿದ್ದು ಸಭಾಪತಿ ಸ್ಥಾನದ ಮೇಲೆ ಎರಡೂ ಪಕ್ಷಗಳ ಶಾಸಕರು ಕಣ್ಣಿಟ್ಟಿದ್ದಾರೆ.
ಜೆಡಿಎಸ್‌ನ ಬಸವರಾಜ್ ಹೊರಟ್ಟಿ ಬಹಿರಂಗವಾಗಿಯೇ ಬಿಜೆಪಿ ತಮಗೆ ಸಭಾಪತಿ ಮಾಡಲು ಬೆಂಬಲ ನೀಡುತ್ತದೆ. ಪಕ್ಷದ ವರಿಷ್ಠ ದೇವೇಗೌಡರು ಹಾಗೂ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸಹಮತ ಇದೆ ಎಂದು ಹೇಳಿದ್ದಾರೆ.
ಆದರೆ, ಬಿಜೆಪಿಯಲ್ಲಿ ಸಭಾಪತಿ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದು, ಹಾಲಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಪದಚ್ಯುತಿ ಆಗುವವರೆಗೂ ಯಾರೂ ಸಭಾಪತಿ ವಿಷಯದ ಕುರಿತು ಬಹಿರಂಗ ಚರ್ಚೆ ಮಾಡದಂತೆ ಪಕ್ಷದ ನಾಯಕರು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಭಾಪತಿ ಸ್ಥಾನಕ್ಕೆ ಪ್ರಮುಖವಾಗಿ ಮೇಲ್ಮನೆಯ ಮುಖ್ಯಸಚೇತಕ ಮಹಾಂತೇಶ್ ಕವಠಗಿ ಮಠ, ಶಶಿಲ್ ನಮೋಶಿ, ಆಯನೂರು ಮಂಜುನಾಥ, ರಘುನಾಥರಾವ್ ಮಲ್ಕಾಪುರೆ, ಸುನಿಲ್ ವಲ್ಯಾಪುರೆ ಹೆಸರು ಕೇಳಿ ಬರುತ್ತಿವೆ. ಆದರೆ, ಸಭಾಪತಿ ರಾಜೀನಾಮೆವರೆಗೂ ಯಾವುದೇ ರೀತಿಯ ಅಧಿಕೃತ ಚರ್ಚೆ ಮಾಡುವಂತಿಲ್ಲ ಎಂಬ ಪಕ್ಷದ ಸೂಚನೆ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಮೌನ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಕೂಡ ಉಪ ಸಭಾಪತಿ ಸ್ಥಾನಕ್ಕೆ ಸ್ಪರ್ಧೆ ಮಾಡುವ ಆಲೋಚನೆ ಹೊಂದಿದೆ ಎನ್ನಲಾಗಿದ್ದು, ಕಾಂಗ್ರೆಸ್‌ನ ಹಿರಿಯ ಸದಸ್ಯ ಕೆ.ಸಿ.ಕೊಂಡಯ್ಯ ಉಪ ಸಭಾಪತಿ ಸ್ಥಾನಕ್ಕೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.