ಅಹ್ಮದಾಬಾದ್ : ಭಾರತದ ಶಕ್ತಿಯು ಡೆಮಾಕ್ರಸಿ, ಡೆಮಾಗ್ರಫಿ ಮತ್ತು ಡಿಮಾಂಡ್ ಎಂಬ ಮೂರು ವಿಷಯಗಳಲ್ಲಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮ್ಮಿಟ್ ಉದ್ಘಾಟಿಸಿ ಹೇಳಿದರು.
ಈ ಶೃಂಗ ಸಭೆಯಲ್ಲಿ ಅನೇಕ ವಿದೇಶೀ ನಾಯಕರು, ಉನ್ನತ ಜಾಗತಿಕ ಮತ್ತು ಭಾರತೀಯ ಕಾರ್ಪೊರೇಟ್ ರಂಗದ ಸಿಇಓಗಳು ಭಾಗವಹಿಸುತ್ತಿದ್ದಾರೆ.
ಭಾರತದ ಅತೀ ದೊಡ್ಡ ಶಕ್ತಿಯು ಪ್ರಜಾಸತ್ತೆಯಲ್ಲಿ ಅಡಕವಾಗಿದೆ ಎಂದು ಹೇಳಿದ ಮೋದಿ, “ಕೆಲವು ಪ್ರಜಾಸತ್ತೆಯಲ್ಲಿ ಪರಿಣಾಮಕಾರಿ ಕ್ರಮಗಳನ್ನು, ಶೀಘ್ರ ಆಡಳಿತೆಯನ್ನು ಸಾಧಿಸಲಾಗದು ಎನ್ನುತ್ತಾರೆ; ಆದರೆ ನಾವು ಕಳೆದ ಎರಡೂವರೆ ವರ್ಷಗಳಲ್ಲಿ ನಮ್ಮ ಭಾರತೀಯ ಪ್ರಜಾಸತ್ತೆಯಲ್ಲಿ ಶೀಘ್ರ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಿದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ’ ಎಂದು ಹೇಳಿದರು.
ಜನವರಿ 10ರಿಂದ 13ರ ತನಕ ಇಲ್ಲಿ ಎಂಟನೇ ಆವೃತ್ತಿಯ ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮ್ಮಿಟ್ ನಡೆಯುತ್ತಿದೆ. ದೀರ್ಘ ಕಾಲ ಬಾಳುವ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಮೇಲೆ ಈ ಶೃಂಗ ಸಭೆಯಲ್ಲಿ ಬೆಳಕು ಚೆಲ್ಲಲಾಗುತ್ತಿದೆ. ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2003ರಲ್ಲಿ ಈ ಶೃಂಗವನ್ನು ಆರಂಭಿಸಲಾಗಿತ್ತು.
ನಾವು ನಮ್ಮ ದೇಶದಲ್ಲಿ ಪ್ರವಾಸೋದ್ಯಮವನ್ನು ದೊಡ್ಡ ಮಟ್ಟದಲ್ಲಿ ಕೈಗೊಳ್ಳಲು ಬಯಸಿದ್ದೇವೆ ಮತ್ತು ನಮಗೆ ಪ್ರವಾಸೋದ್ಯಮದ ಮೂಲ ಸೌಕರ್ಯಗಳ ಅಗತ್ಯವಿದೆ ಎಂದು ಮೋದಿ ಹೇಳಿದರು.
ಭಾರತವು ಇಂದು ವಿಶ್ವದ ಆರನೇ ಬೃಹತ್ ಉತ್ಪಾದಕ ದೇಶವಾಗಿದೆ; ಮೇಕ್ ಇನ್ ಇಂಡಿಯಾ ಭಾರತದ ಈ ತನಕದ ಅತೀ ದೊಡ್ಡ ಬ್ರಾಂಡ್ ಆಗಿದೆ; ಸುಲಲಿತವಾಗಿ ಉದ್ಯಮ ಕೈಗೊಳ್ಳುವುದಕ್ಕೆ ನಾವು ಹೆಚ್ಚಿನ ಒತ್ತು ನೀಡಿದ್ದೇವೆ; ಭಾರತದ ಆರ್ಥಿಕತೆಯ ಸುಧಾರಣೆಯನ್ನು ಮುಂದುವರಿಸುವುದಕ್ಕೆ ನನ್ನ ಸರಕಾರ ಬದ್ಧವಾಗಿದೆ ಎಂದು ಮೋದಿ ಹೇಳಿದರು.