Advertisement
ನಗರದಲ್ಲಿ ಅಳವಡಿಸಿರುವ ಫ್ಲೆಕ್ಸ್‌ಗಳ ತೆರವು ಕಾರ್ಯಾಚರಣೆ ಮಂಗಳವಾರ ಬೆಳಗ್ಗೆ ಆರಂಭಗೊಂಡಿತು. ಉಡುಪಿಯಲ್ಲಿ ನ.24ರಿಂದ 26ರ ವರೆಗೆ ನಡೆಯುವ ಧರ್ಮಸಂಸತ್ ಪ್ರಚಾರಾರ್ಥ ಅಳವಡಿಸಿದ್ದ ಫ್ಲೆಕ್ಸ್‌ಗಳನ್ನು ಕೂಡ ತೆರವುಗೊಳಿಸತೊಡಗಿದರು. ಈ ಬಗ್ಗೆ ಮಾಹಿತಿ ಪಡೆದ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ ಶೇಣವ ಅವರು ಕಾರ್ಯಕರ್ತರೊಂದಿಗೆ ತೆರಳಿ ಧರ್ಮಸಂಸತ್ ಪ್ರಚಾರದ ಫ್ಲೆಕ್ಸ್ ಗಳ ತೆರವು ಕಾರ್ಯಾಚರಣೆಯನ್ನು ವಿರೋಧಿಸಿದರು. ಸ್ಥಳಕ್ಕೆ ಆಗಮಿಸಿದ ಕದ್ರಿ ಪೊಲೀಸ್ ಇನ್ಸ್‌ಪೆಕ್ಟರ್ ಮಾರುತಿ ನಾಯಕ್ ಹಾಗೂ ಪಾಲಿಕೆಯ ಅಧಿಕಾರಿಗಳು ಮಾತುಕತೆ ನಡೆಸಿದ್ದು, ಬಳಿಕ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.
ಉಡುಪಿಯಲ್ಲಿ ನ.24ರಿಂದ 26 ರವರೆಗೆ ನಡೆಯುವ ಧರ್ಮಸಂಸತ್‌ನ ಪ್ರಚಾರಾರ್ಥ ವಿಶ್ವಹಿಂದೂ ಪರಿಷತ್ ಫ್ಲೆಕ್ಸ್ ಗಳನ್ನು ಅಳವಡಿಸಿದ್ದು, ಕಾರ್ಯಕ್ರಮಕ್ಕೆ ಕೇವಲ 3 ದಿನ ಬಾಕಿ ಇರುವಾಗ ಇವುಗಳನ್ನು ತೆರವುಗೊಳಿಸುವ ಕಾರ್ಯವನ್ನು ಪಾಲಿಕೆ ಆರಂಭಿಸಿದೆ. ನಗರದಲ್ಲಿ ವಿವಿಧ ಕಾರ್ಯಕ್ರಮಗಳ ಸಾವಿರಾರು ಫ್ಲೆಕ್ಸ್‌ಗಳು ಇದ್ದರೂ ಅದನ್ನು ತೆರವುಗೊಳಿಸದ ಪಾಲಿಕೆ ಏಕಾಏಕಿ ವಿಶ್ವಹಿಂದೂ ಪರಿಷತ್‌ನ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿರುವುದು ಖಂಡನೀಯವಾಗಿದೆ. ಒಂದು ವೇಳೆ ವಿಶ್ವಹಿಂದೂ ಪರಿಷತ್ ಅಳವಡಿಸಿರುವ ಫ್ಲೆಕ್ಸ್ ಗಳನ್ನು ತೆರವು ಗೊಳಿಸುವ ಕಾರ್ಯಾಚರಣೆ ಮುಂದುವರಿದರೆ ತೀವ್ರ ರೀತಿಯ ಪ್ರತಿಭಟನೆ ಮಾಡಲಾಗುವುದು ಎಂದು ಜಗದೀಶ ಶೇಣವ ಹಾಗೂ ನಗರ ಸಂಚಾಲಕ ಪ್ರವೀಣ್ ಕುತ್ತಾರ್ ತಿಳಿಸಿದ್ದಾರೆ.