Advertisement

Mangaluru: ಕೆತ್ತಿಕಲ್‌ ಹೆದ್ದಾರಿಗೆ ವೆಟ್‌ವೆಲ್‌ ಬಲಿ?

02:37 PM Aug 20, 2024 | Team Udayavani |

ಮಹಾನಗರ: ಕೋಟ್ಯಂತರ ರೂಪಾಯಿ ಅನುದಾನ ಬಳಸಿಕೊಂಡು ವಾಮಂಜೂರಿನ ಅಮೃತ ನಗರದ ಕೆತ್ತಿಕಲ್‌ ಗುಡ್ಡದ ಮೇಲೆ ನಿರ್ಮಾಣ ಮಾಡಲಾದ ಒಳಚರಂಡಿ ಯೋಜನೆ ಸಂಬಂಧಿತ ವೆಟ್‌ವೆಲ್‌ ಅವೈಜ್ಞಾನಿಕ ಕಾಮಗಾರಿಗೆ ಬಲಿಯಾಗುವ ಅಪಾಯದಲ್ಲಿದೆ.

Advertisement

ಹೆದ್ದಾರಿ ಕಾಮಗಾರಿಗೆ ಅಸಮರ್ಪಕವಾಗಿ ಬೃಹತ್‌ ಗುಡ್ಡವನ್ನು ಅಗೆದ ಕಾರಣ ಮತ್ತು ಮಣ್ಣು ಗಣಿಗಾರಿಕೆ ನಡೆಸಿದ್ದರಿಂದ ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಒಳಗಾಗಿದೆ. ವೆಟ್‌ವೆಲ್‌ನ ತೀರಾ ಸಮೀಪದವರೆಗೆ ಮಣ್ಣು ತೆಗೆಯಲಾಗಿದ್ದು, ಒಂದು ವೇಳೆ ಗುಡ್ಡ ಇನ್ನಷ್ಟು ಕುಸಿದರೆ ವೆಟ್‌ ವೆಲ್‌ ಸ್ಥಾವರ ಉರುಳಲಿದೆ. ಅದರಲ್ಲೂ ವಯನಾಡು ಘಟನೆ ಬಳಿಕ ಸ್ಥಳೀಯರಲ್ಲಿ ಆತಂಕ ಜೋರಾಗಿದೆ. ಹೀಗಾದಲ್ಲಿ ಎರಡು ಕೋಟಿ ರೂ. ವೆಚ್ಚದ ಯೋಜನೆ ಮಣ್ಣುಪಾಲಾಗಲಿದೆ.

ವರದಿ ಬಂದ ಬಳಿಕ ನಿರ್ಧಾರ ಸಾಧ್ಯತೆ
ಕೆತ್ತಿಕಲ್‌ ಪ್ರದೇಶದ ಅಪಾಯದ ಬಗ್ಗೆ ಈಗಾಗಲೇ ಶಿರೂರಿನಲ್ಲಿ ಪರಿಶೀಲನೆ ನಡೆಸಿದ ತಂಡ ತಪಾಸಣೆ ನಡೆಸಿದೆ. ಇಲ್ಲಿನ ಅಪಾಯದ ಬಗ್ಗೆ ಸಂಪೂರ್ಣ ವಿವರ ಸಂಗ್ರಹಿಸಿದೆ. ತಜ್ಞರು ನೀಡುವ ವರದಿಯ ಆಧಾರದಲ್ಲಿ ಜಿಲ್ಲಾಡಳಿತ ಮುಂದಿನ ಕ್ರಮ ವಹಿಸಲಿದೆ. ಒಂದೊಮ್ಮೆ ಸ್ಥಳಾಂತರಕ್ಕೆ ಸೂಚಿಸಿದಲ್ಲಿ ಹೆದ್ದಾರಿ ಪ್ರಾಧಿಕಾರದ ಮೂಲಕವೇ ಮರು ನಿರ್ಮಾಣ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಬದಲಿ ಸ್ಥಳದ ಬಗ್ಗೆ ನಿರ್ಧಾರವಾಗುವ ಸಾಧ್ಯತೆ ಇದೆ.

9 ಮನೆಗಳು ಅಪಾಯದಲ್ಲಿ
ಕೆತ್ತಿಕಲ್‌ ಗುಡ್ಡದ ಅಮೃತ ನಗರದ ಬಳಿ ಇರುವ 9 ಮನೆಗಳು ಅಪಾಯದಲ್ಲಿದ್ದು, ಈ ಪೈಕಿ 3 ಮನೆಗಳು ಹೆಚ್ಚಿನ ಸಮಸ್ಯೆಗೆ ಒಳಗಾಗುವ ಸಾಧ್ಯತೆ ತಲೆದೋರಿದೆ. ವೆಟ್‌ವೆಲ್‌ ಜತೆ ಮನೆಗಳನ್ನೂ ಕೂಡ ಸ್ಥಳಾಂತರ ಮಾಡಬೇಕಾಗುತ್ತದೆ. ಜಿಲ್ಲಾಡಳಿತದ ಮೂಲಕ ಪರ್ಯಾಯ ವ್ಯವಸ್ಥೆಯಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ತ್ಯಾಜ್ಯ ನೀರು ಸಂಪರ್ಕದ ವೆಲ್‌ ಇದು
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು ವೆಟ್‌ವೆಲ್‌ ನಿರ್ಮಾಣಕ್ಕೆ 2 ಕೋ. ರೂ. ಅನುದಾನ ನೀಡಿದೆ. ಹಿಂದಿನ ಸರಕಾರದಲ್ಲಿ ಮಂಜೂರಾದ ಯೋಜನೆಯಂತೆ ಒಂದು ವರ್ಷದ ಹಿಂದೆ ಕಾಮಗಾರಿ ಆರಂಭವಾಗಿತ್ತು. ಅಮೃತನಗರದ ಸುತ್ತಮುತ್ತಲ ಹಲವಾರು ಮನೆಗಳ ತ್ಯಾಜ್ಯ ನೀರು ಇದೇ ವೆಟ್‌ವೆಲ್‌ಗೆ ಸೇರಬೇಕಿದೆ. ಇಲ್ಲಿನ ಮನೆಗಳ ಒಳಚರಂಡಿ ಸಂಪರ್ಕದ ಕಾಮಗಾರಿ ಮುಗಿದಿದೆ. ಎರಡು ಭಾಗಗಳಿಂದ ಸಂಪರ್ಕಕ್ಕೆ ವ್ಯವಸ್ಥೆ ಮಾಡಲಾಗಿದೆ. ವೆಟ್‌ವೆಲ್‌ ಟ್ಯಾಂಕ್‌ ನಿರ್ಮಾಣವಾಗಿದೆ. ಪಿಲ್ಲರ್‌ ಗಳನ್ನು ಅಳವಡಿಸಿ ಮೇಲ್ಭಾಗದಲ್ಲಿ ಸುಸಜ್ಜಿತ ಕೊಠಡಿ ನಿರ್ಮಿಸಲಾಗಿದೆ. ಬಹುತೇಕ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭಕ್ಕೆ ಸಿದ್ಧತೆ ನಡೆಯುತ್ತಿದ್ದಂತೆ ಆತಂಕ ಎದುರಾಗಿದೆ.

Advertisement

ಅಪಾಯ ಕಂಡರೆ ಸ್ಥಳಾಂತರ
ಪ್ರಸ್ತುತ ಕಟ್ಟಡದ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸ್ಥಳಾಂತರದ ಬಗ್ಗೆ ಚರ್ಚೆ ನಡೆದಿದೆ. ವೆಟ್‌ ವೆಲ್‌ನಲ್ಲಿ ಯಾವುದೇ ಯಂತ್ರಗಳನ್ನು ಅಳವಡಿಸಿಲ್ಲ. ಅಪಾಯದ ಬಗ್ಗೆ ವರದಿ ಬಂದ ಬಳಿಕ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ.
-ಆನಂದ್‌ ಸಿ.ಎಲ್‌., ಪಾಲಿಕೆ ಆಯುಕ್ತರು

ಆರಂಭದಲ್ಲಿ ಅಪಾಯವಿರಲಿಲ್ಲ
ಕಾಮಗಾರಿ ಆರಂಭಿಸಿದ ವೇಳೆ ಯಾವುದೇ ರೀತಿಯ ಅಪಾಯವಿರಲಿಲ್ಲ. ಗುಡ್ಡ ಅಗೆತವೂ ನಡೆದಿರಲಿಲ್ಲ. ಜಿಲ್ಲಾಡಳಿತದ ಮುಂದಾಳುತ್ವದಲ್ಲಿ ಪರಿಶೀಲನೆ ನಡೆಯುತ್ತಿದೆ. ತಜ್ಞರ ಸಮಿತಿ ವರದಿ ಬಳಿಕ ಮುಂದಿನ ನಿರ್ಧಾರವಾಗಲಿದೆ.
-ಹೇಮಲತಾ ರಘು ಸಾಲ್ಯಾನ್‌, ಪಾಲಿಕೆ ಸದಸ್ಯೆ

– ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.