Advertisement

ಪಶು ಇಲಾಖೆ ಖಾಲಿ ಹುದ್ದೆ ಶೀಘ್ರ ಭರ್ತಿ: ಚವ್ಹಾಣ್‌

09:09 PM Aug 29, 2021 | Team Udayavani |

ಹಾವೇರಿ: ರಾಜ್ಯದಲ್ಲಿ 100 ಎಕರೆ ಜಾಗದಲ್ಲಿ ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಪಶುಲೋಕ್‌ (ಕಾಯಂ ಸ್ವರೂಪಿ ಪಶು ಪಾಲನೆ) ನಿರ್ಮಿಸುವುದರ ಜತೆಗೆ ರಾಜ್ಯದಲ್ಲಿ ಪಶು ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಚಿಂತನೆ ನಡೆದಿದೆ ಎಂದು ಪಶು ಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ ಹೇಳಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಶು ಲೋಕ್‌ನಿಂದ ಟೂರಿಸಂ ಜತೆಗೆ ಪಶುಗಳ ವಿವಿಧ ತಳಿಗಳ ಅಧ್ಯಯನ, ಸಂರಕ್ಷಣೆ ಮಾಡುವುದು, ಪ್ರಾಣಿಗಳ ಬಗ್ಗೆ ಪ್ರತಿಯೊಬ್ಬರಿಗೂ ಸಂಪೂರ್ಣ ಮಾಹಿತಿ ನೀಡಲು ಸಹಕಾರಿಯಾಗುತ್ತದೆ. ಪಶು ಸಂಗೋಪನೆ ಇಲಾಖೆಯ 18 ಸಾವಿರ ಹುದ್ದೆಗಳಲ್ಲಿ 8 ಸಾವಿರ ಹುದ್ದೆಗಳು ಖಾಲಿ ಇದ್ದು, ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೆರಿಟ್‌ ಮೇಲೆ ನೇರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಪ್ರಾಣಿ ರಕ್ಷಣೆಗಾಗಿ ರಾಜ್ಯದಲ್ಲಿ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಲಾಗಿದೆ. ಪಶು ಸಂಜೀವಿನಿ ಆ್ಯಂಬುಲೆನ್ಸ್‌ 15 ಜಿಲ್ಲೆಗಳಿಗೆ ಒದಗಿಸಲಾಗಿದ್ದು, ಇನ್ನುಳಿದ ಜಿಲ್ಲೆಗಳಿಗೆ ಆ್ಯಂಬುಲೆನ್ಸ್‌ ಒದಗಿಸಲಾಗುವುದು ಎಂದರು.

ದೇಶದಲ್ಲಿಯೇ ಮೊದಲು ಎಲ್ಲ ಪ್ರಾಣಿಗಳ ಯೋಗಕ್ಷೇಮಕ್ಕಾಗಿ ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಈ ಕೇಂದ್ರ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ರೈತರು ಪಶುಗಳ ಚಿಕಿತ್ಸೆ, ಪ್ರಾಣಿಗಳ ಸಮಸ್ಯೆ, ಪಶು ಕುರಿತ ಯಾವುದೇ ಮಾಹಿತಿ ಪಡೆದುಕೊಳ್ಳಬಹುದು.

ಇದನ್ನೂ ಓದಿ:ಎಐಎಡಿಎಂಕೆಯನ್ನು ಹಿಡಿತಕ್ಕೆ ಪಡೆಯಲು ಶಶಿಕಲಾ ಕಾದು ನೋಡುವ ತಂತ್ರ!

ಆರ್‌ಐಡಿಎಫ್‌ ಯೋಜನೆಯಡಿ 288 ಕಟ್ಟಡಗಳಿಗೆ ಅನುದಾನ ಒದಗಿಸಲಾಗಿದೆ. ರಾಜ್ಯದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ನ್ಯಾಷನಲ್‌ ನ್ಯಾವಲ್‌ ಸ್ಟಾಕ್‌ ಮಿಷನ್‌ ಅಡಿ ರೈತರಿಗೆ ಅನುಕೂಲವಾಗುವಂತಹ ನಾರಿ ಸುರ್ವಣ ಕುರಿ ತಳಿ ಅಭಿವೃದ್ಧಿ, ನಂದಿನಿ ದುರ್ಗ ಮೇಕೆ ಅಭಿವೃದ್ಧಿ, ಪಶು ಚಿಕಿತ್ಸೆ, ಔಷಧಿ ಕೇಂದ್ರಗಳು, ಅಮೃತ ಶಿಲಾ ಯೋಜನೆಯಲ್ಲಿ ರೈತರಿಗೆ ಹೋರಿ, ಕರು ವಿತರಣೆ, ದೇಶಿ ತಳಿಗಳ ಅಭಿವೃದ್ದಿ ಯೋಜನೆಗಳನ್ನು ಘೋಷ‌ಣೆ ಮಾಡಲಾಗಿದೆ ಎಂದರು.

Advertisement

ರಾಜ್ಯ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಆಯೋಗದ ಅಧ್ಯಕ್ಷ, ಶಾಸಕ ನೆಹರು ಓಲೇಕಾರ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಪಶು ಸಂಗೋಪನಾ ಇಲಾಖೆ ಜಂಟಿ ನಿರ್ದೇಶಕ ಡಾ| ಭಾಸ್ಕರ್‌ ರಾವ್‌, ಉಪನಿರ್ದೇಶಕ ರಾಜು ಕೂಲೇರ ಸೇರಿದಂತೆ ಇತರರು ಇದ್ದರು.

2021-22ರ ಬಜೆಟ್‌ನಲ್ಲಿ ಜಿಲ್ಲೆಗೊಂದು ಗೋಶಾಲೆ ನೀಡಲಾಗಿದೆ. 22 ಜಿಲ್ಲೆಗಳಲ್ಲಿ ಗೋಶಾಲೆಗೆ ಸ್ಥಳ ಗುರುತಿಸಲಾಗಿದೆ. ಪ್ರತಿ ಜಿಲ್ಲೆ ಗೋಶಾಲೆಯಲ್ಲಿ 6-7 ಸಾವಿರ ಗೋವುಗಳನ್ನು ನೋಡಿಕೊಳ್ಳಬಹುದು. ಆಹಾರ, ನೀರು, ಗೋವುಗಳ ಆರೈಕೆ ಮಾಡಲಾಗುವುದು. ಈಗಾಗಲೇ ರಾಜ್ಯದಲ್ಲಿ 188 ಖಾಸಗಿ ಗೋಶಾಲೆಗಳು ನೋಂದಣಿಯಾಗಿವೆ. ಇವುಗಳಿಗೆ ಅನುದಾನ ನೀಡಲಾಗುತ್ತಿದೆ.
– ಪ್ರಭು ಚವ್ಹಾಣ, ಪಶು ಸಂಗೋಪನಾ ಇಲಾಖೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next