ಬಂಟ್ವಾಳ: ಅಮ್ಮುಂಜೆ ಗ್ರಾಮದ ಬೆಂಜನಪದವಿನಲ್ಲಿ ಸುಸಜ್ಜಿತ ಪಶು ಚಿಕಿತ್ಸಾಲಯವಿದೆ. ಆದರೆ ಸಿಬಂದಿ ಕೊರತೆಯಿಂದ ಅಲ್ಲಿ ದಿನವಿಡೀ ಸೇವೆ ಇಲ್ಲದಾಗಿದೆ. ಪಂಜಿಕಲ್ಲು ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬಂದಿ ಮಧ್ಯಾಹ್ನದ ಬಳಿಕ ಬೆಂಜನಪದವಿಗೆ ತೆರಳಿ ಕರ್ತವ್ಯ ನಿರ್ವಹಿಸಬೇಕಾದ ಸ್ಥಿತಿ ಇದೆ.
ಪ್ರಸ್ತುತ ಇಲಾಖೆಯಲ್ಲಿ ಹಲವು ಸಿಬಂದಿ ಕೊರತೆ ಇದ್ದು, ಹೀಗಾಗಿ ಇರುವ ಸಿಬಂದಿ 2-3 ಜವಾಬ್ದಾರಿಗಳನ್ನು ನಿರ್ವಹಿಸಬೇಕಾದ ಸ್ಥಿತಿ ಇದೆ. ಹೀಗಾಗಿ ಬೆಂಜನಪದವು ಕೇಂದ್ರ ಮಧ್ಯಾಹ್ನದ ಬಳಿಕ ತೆರೆಯುತ್ತಿದ್ದು, ಬೆಂಜನ ಪದವು ಪಶು ಚಿಕಿತ್ಸಾ ಕೇಂದ್ರದಲ್ಲಿದ್ದ ಡಿ ಗ್ರೂಪ್ ಸಿಬಂದಿ ನಿವೃತ್ತಿ ಹೊಂದಿದ ಬಳಿಕ ಈ ಸ್ಥಿತಿ ಬಂದಿದೆ.
ಅಲ್ಲಿಗೆ ಡೆಪ್ಯುಟೇಶನ್ ಆಧಾರದಲ್ಲಿ ನಿರೀಕ್ಷಕರೊಬ್ಬರು ಆಗಮಿ ಸುತ್ತಿದ್ದು, ಅವರು ಬೆಳಗ್ಗಿನ ಹೊತ್ತು ಪಂಜಿಕಲ್ಲು ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಹೀಗಾಗಿ ಇಲ್ಲಿ ಮಧ್ಯಾಹ್ನದ ಬಳಿಕ ತೆರೆಯುತ್ತದೆ. ಎರಡು ವರ್ಷಗಳ ಹಿಂದೆ ಬೆಂಜಪದವಿನ ಪಶು ಚಿಕಿತ್ಸಾಲಯಕ್ಕೆ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಆದರೆ ಸಿಬಂದಿಯಿಲ್ಲದೆ ಸಮರ್ಪಕ ಸೇವೆ ಇಲ್ಲದಾಗಿದೆ.
ಇದನ್ನೂ ಓದಿ:ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿ ಆರಂಭಿಕ ಆಘಾತ ನೀಡಿದ ಪಾಕ್
ಪಶು ಚಿಕಿತ್ಸಾಲಯದ ನಾಮಫಲಕದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1, ಮಧ್ಯಾಹ್ನ 3ರಿಂದ ಸಂಜೆ 5ರ ವರೆಗೆ ಸೇವೆ ಸಿಗುತ್ತದೆ ಎಂದು ಬರೆದಿದ್ದರೂ ಸಿಬಂದಿ ಕೊರತೆಯಿಂದ ಬಾಗಿಲಿನಲ್ಲಿ ಇನ್ನೊಂದು ಫಲಕವಿದ್ದು, ಅದರಲ್ಲಿ ಮಧ್ಯಾಹ್ನ 3ರಿಂದ ಸಂಜೆ 5ರ ವರೆಗೆ ಮಾತ್ರ ತೆರೆದಿರುತ್ತದೆ ಎಂದು ಬರೆಯಲಾಗಿದೆ.
ವೀಡಿಯೋ ಬಳಿಕ ಎಚ್ಚೆತ್ತ ಇಲಾಖೆ
ಪಶು ಚಿಕಿತ್ಸಾ ಕೇಂದ್ರವು ತಡವಾಗಿ ತೆರೆಯುತ್ತಿದೆ ಹಾಗೂ ಕೇಂದ್ರದ ಸುತ್ತಲೂ ಪೊದೆಗಳು ಬೆಳೆದಿವೆ ಎಂದು ಹೇಳಿ ಗ್ರಾಮದ ವ್ಯಕ್ತಿಯೋರ್ವರು ವೀಡಿಯೋ ಮಾಡಿದ್ದು, ಅದು ವೈರಲ್ ಆಗು ತ್ತಿದ್ದಂತೆ ಪಶು ಇಲಾಖೆಯ ರಸ್ತೆ ಹಾಗೂ ಸುತ್ತಲೂ ಇದ್ದ ಪೊದೆಗಳನ್ನು ತೆರವು ಮಾಡಲಾಗಿದೆ.