Advertisement

ದಶಕದಿಂದ ಬಾಗಿಲು ತೆರೆಯದ ಪಶು ಚಿಕಿತ್ಸಾಲಯ

04:42 AM Jan 04, 2019 | |

ಸುಬ್ರಹ್ಮಣ್ಯ : ಹೋಬಳಿ ಕೇಂದ್ರ ಪಂಜದ ಪಶು ಚಿಕಿತ್ಸಾಲಯ ಹತ್ತು ವರ್ಷಗಳಿಂದ ಬಾಗಿಲು ತೆರೆದಿಲ್ಲ. ಬಾಗಿಲು ಮುಚ್ಚಿದ ಈ ಕೇಂದ್ರದಿಂದ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ.

Advertisement

ಇಲ್ಲಿನ ಪಶು ಚಿಕಿತ್ಸಾ ಕೇಂದ್ರದಲ್ಲಿ ಯಾವ ಹುದ್ದೆಯಲ್ಲೂ ಅಧಿಕಾರಿಗಳು ಮತ್ತು ಸಿಬಂದಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಸಹಾಯಕ ನಿದೇಶಕರು, ಜಾನುವಾರು ಅಧಿಕಾರಿ, ಪಶುವೈದ್ಯಕೀಯ ಪರಿವೀಕ್ಷಕರು, ಪಶುವೈದ್ಯ ಸಹಾಯಕರು, ಇಬ್ಬರು ಡಿ ದರ್ಜೆಯ ಹುದ್ದೆಗಳು ಖಾಲಿ ಇವೆ. ಕಚೇರಿಯ ಬಾಗಿಲಿನಲ್ಲಿ ಬೆಳ್ಳಾರೆ ಕೇಂದ್ರದ ವೈದ್ಯರ ಮೊಬೈಲ್‌ ಸಂಖ್ಯೆ ನಮೂದಿಸಿದ್ದು, ಅಗತ್ಯ ಸೇವೆ ಬಯಸಿ ಬರುವವರು ಈ ವೈದ್ಯರಿಗೆ ಕರೆ ಮಾಡಿ ವೈದ್ಯಕೀಯ ಸೇವೆ ಪಡೆಯಬಹುದು.

ಪಶುವೈದ್ಯಾಧಿಕಾರಿ ಕಚೇರಿ, ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಈ ಪಶು ಚಿಕಿತ್ಸಾಲಯ ಮತ್ತು ಕೃತಕ ಗರ್ಭಧಾರಣ ಕೇಂದ್ರ ವರ್ಷಗಳ ಹಿಂದೆಯೇ ಕಾರ್ಯಾರಂಭ ಮಾಡಿದ್ದರೂ ಆಮೇಲೆ ಇದರ ಕಥೆ ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ ಹೋಬಳಿ ಕೇಂದ್ರದ ಬಹುಮುಖ್ಯ ಕಚೇರಿ ಕಟ್ಟಡವೀಗ ಪಾಳು ಬಿದ್ದಿದೆ.

ಪ್ರಯೋಜನಕಾರಿಯಾಗಿತ್ತು
ಈ ಪಶು ಚಿಕಿತ್ಸಾಲಯ ಕೃಷಿಕರ ಸಾಕು ಪ್ರಾಣಿಗಳ ತುರ್ತು ಸೇವೆಗೆ ಬಹಳಷ್ಟು ಪ್ರಯೋಜನಕಾರಿಯಾಗಿತ್ತು. ಜಾನುವಾರು, ನಾಯಿ, ಆಡು, ಕುರಿ ಕುಕ್ಕುಟ ಹೀಗೆ ಪ್ರಾಣಿ, ಪಕ್ಷಿಗಳಿಗೆ ಅನಾರೋಗ್ಯ ಕಾಣಿಸಿಕೊಂಡಾಗ ರೋಗ ನಿವಾರಣೆ ಔಷಧಿ, ಚುಚ್ಚುಮದ್ದನ್ನು ಇಲ್ಲಿ ನೀಡಲಾಗುತ್ತಿತ್ತು. ಪಂಜ, ಕೇನ್ಯ, ಬಳ್ಪ, ಕೂತ್ಕುಂಜ, ಐವತ್ತೂಕ್ಲು, ಕಲ್ಮಡ್ಕ, ಪಂಬೆತ್ತಾಡಿ ಎಣ್ಮೂರು ಮುರುಳ್ಯ, ಎಡಮಂಗಲ ಮೊದಲಾದ ಗ್ರಾಮಗಳ ಕೃಷಿಕರು ಈ ಪಶು ಚಿಕಿತ್ಸಾ ಕೇಂದ್ರದ ಪ್ರಯೋಜನ ಪಡೆಯುತ್ತಿದ್ದರು. ಈ ಕೇಂದ್ರ ಬಾಗಿಲು ಮುಚ್ಚಿದ್ದರಿಂದ ಈಗ ಸಾಕು ಪ್ರಾಣಿಗಳ ಚಿಕಿತ್ಸೆಗೆ ದೂರದ ಕೇಂದ್ರಗಳಿಗೆ ತೆರಳಬೇಕಾಗಿದೆ.

ಹೈನುಗಾರರಿಗೆ ತೊಂದರೆ
ಕೃಷಿ ಅವಲಂಬಿತ ಈ ಭಾಗದಲ್ಲಿ ಅನೇಕ ಮಂದಿ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಪಂಜ, ಐವತ್ತೂಕ್ಲು, ಕೂತ್ಕುಂಜ, ಬಳ್ಪ ಮೊದಲಾದೆಡೆ ಹಾಲಿನ ಡೈರಿ ಕೂಡ ಇದೆ. ಎಂಟು ಕ್ಲಸ್ಟರ್‌ ವ್ಯಾಪ್ತಿಗೆ ಸಂಬಂಧಿಸಿ ಪಂಜದಲ್ಲಿ ಸಾಂದ್ರ ಶೀತಲೀಕರಣ ಕೇಂದ್ರ ಕೂಡ ಇದೆ. ಈ ಶೀತಲೀಕರಣ ಕೇಂದ್ರದಲ್ಲಿ ದಿನವೊಂದಕ್ಕೆ 3 ಸಾವಿರ ಲೀ.ನಷ್ಟು ಹಾಲು ಸಂಗ್ರಹಿಸಲಾಗುತ್ತಿದೆ. ಅಧಿಕ ಮಂದಿ ಹಾಲಿನ ಡೈರಿಗೆ ನಿತ್ಯ ಹಾಲು ಒದಗಿಸುತ್ತಿರುವವರು ಈ ಭಾಗದಲ್ಲಿದ್ದು, ಪಶು ಚಿಕಿತ್ಸಾ ಕೇಂದ್ರ ಮುಚ್ಚಿರುವ ಕಾರಣ ಹೈನುಗಾರರು ತೊಂದರೆಗೆ ಒಳಗಾಗಿದ್ದಾರೆ.

Advertisement

ಗಮನ ಹರಿಸುತ್ತೇನೆ
ಪಂಜದಲ್ಲಿ ಹೊಸ ಆಸ್ಪತ್ರೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇಷ್ಟರೊಳಗೆ ಕಟ್ಟಡ ಪೂರ್ಣಗೊಳ್ಳಬೇಕಿತ್ತು. ಏನೋ ಕಾರಣಕ್ಕೆ ವಿಳಂಬವಾಗಿದೆ.ಇತ್ತೀಚೆಗಷ್ಟೆ ಜವಾಬ್ದಾರಿ ವಹಿಸಿಕೊಂಡಿದ್ದು, ಈ ಕುರಿತು ಗಮನಹರಿಸುವೆ.
ಡಾ| ಗುರುಮೂರ್ತಿ, 
 ಸಹಾಯಕ ನಿರ್ದೇಶಕರು,
 ಪಶುಸಂಗೋಪನೆ ಇಲಾಖೆ 

ಹೊಸ ಕಟ್ಟಡ ಪ್ರಗತಿಯಲ್ಲಿ 
ಸುದೀರ್ಘ‌ ಅವಧಿ ಬಾಗಿಲು ಮುಚ್ಚಿದ ಈ ಪಶುಚಿಕಿತ್ಸಾ ಕೇಂದ್ರ ಸಂಪೂರ್ಣ ಶಿಥಿಲಗೊಂಡಿದೆ. ಪಕ್ಕದಲ್ಲೇ ನೂತನ ಪಶು ಚಿಕಿತ್ಸಾ ಕೇಂದ್ರ ಕೆಆರ್‌ಡಿಸಿಎಲ್‌ ಹಾಗೂ ನಿರ್ಮಿತಿ ಕೇಂದ್ರದ ಮೂಲಕ ನಿರ್ಮಾಣಗೊಳ್ಳುತ್ತಿದೆ. ಕಾಮಗಾರಿ ಪ್ರಗತಿಯಲ್ಲಿದೆ. ನಿಗದಿತ ಸಮಯದಲ್ಲಿ ಕಟ್ಟಡ ಪೂರ್ಣಗೊಳ್ಳದೆ ಇರುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಕಟ್ಟಡ ಕಾಮಗಾರಿಗೆ ವೇಗ ದೊರಕಿ ಶೀಘ್ರ ಈ ಕೇಂದ್ರ ಕೃಷಿಕರ ಪ್ರಾಣಿ, ಪಕ್ಷಿಗಳಿಗೆ ಪ್ರಯೋಜನಕ್ಕೆ ಸಿಗಬೇಕಿದೆ.

ಅಕ್ರಮ ಚಟುವಟಿಕೆ ತಾಣ! 
ಪೊದರುಗಳಿಂದ ಆವೃತವಾಗಿರುವ ಪಶು ಚಿಕಿತ್ಸಾ ಕೇಂದ್ರ ಹಾಗೂ ಪಕ್ಕದ ಜಾನುವಾರು ತಪಾಸಣೆ ಕೊಠಡಿ ಸಾರ್ವಜನಿಕ ಮುಕ್ತವಾಗಿದೆ. ಕಾನೂನು ಬಾಹಿರ ಚಟುವಟಿಕೆಗೆ ಈ ಕಟ್ಟಡಗಳು ಬಳಕೆಯಾಗುವ ಸಾಧ್ಯತೆ ಹೆಚ್ಚು. ಪರಿಸರದಲ್ಲಿ ಮದ್ಯ, ಧೂಮಪಾನ ಸೇವನೆಯಂತಹ ಚಟುವಟಿಕೆಗಳು ನಡೆದಿರುವುದು ಕಂಡುಬರುತ್ತಿದೆ. ಅಕ್ರಮ ಕೇಂದ್ರವಾಗಿ ಪರಿವರ್ತನೆ ಆಗುವ ಮುನ್ನ ಪರಿಸರ ಶುಚಿಗೊಳಿಸಬೇಕಿದೆ.

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next