ಚೆನ್ನೈ: ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ವಿವೇಕ್ (59) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳಿದಿದ್ದಾರೆ.
ಶುಕ್ರವಾರ (ಏಪ್ರಿಲ್ 16) ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿವೇಕ್ ಅವರ ಸ್ಥಿತಿ ಗಂಭೀರವಾಗಿತ್ತು. ಇವರು ಗುರುವಾರ(ಏ.15) ಒಮಾನ್ದುರಾರ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದರು ವರದಿಯಾಗಿದೆ.
ಹೃದಯ ನಾಳದಲ್ಲಿ ರಕ್ತ ಸಂಚಾರದಲ್ಲಿ ತೊಂದರೆಯಾದ ಕಾರಣ ವದಪಳನಿಯಲ್ಲಿರುವ ಎಸ್ ಐಎಂಎಸ್ ಆಸ್ಪತ್ರೆಯ ಐಸಿಯುಗೆ ವಿವೇಕ್ ಅವರನ್ನು ದಾಖಲಿಸಲಾಗಿತ್ತು. ಆದರೆ ಇಂದು ಮುಂಜಾನೆ 4:35ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಈ ಮೊದಲು ಹೃದಯ ಸಂಬಂಧಿ ಸಮಸ್ಯೆಗೆ ವಿವೇಕ್ ತುತ್ತಾಗಿರಲಿಲ್ಲ. ಇದೇ ಮೊದಲ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಸೋಂಕಿನ ಲಕ್ಷಣಗಳೂ ಕಾಣಿಸಿಕೊಂಡಿರಲಿಲ್ಲ. ಆದರೆ ರಕ್ತದೊತ್ತಡದಲ್ಲಿ ಮಾತ್ರ ಕೊಂಚ ಏರುಪೇರಾಗಿತ್ತು. ಹೀಗಾಗಿ ವೈದ್ಯರ ತಂಡ ಆರೋಗ್ಯ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಆ್ಯಂಜಿಯೋಗ್ರಾಮ್ ಚಿಕಿತ್ಸೆಗಾಗಿ ದಾಖಲು ಮಾಡಿಕೊಂಡಿದ್ದರು. ಅದಾಗ್ಯೂ ಪರಿಸ್ಥಿತಿ ಗಂಭೀರವಾಗಿತ್ತು. ಇಂದು ಮುಂಜಾನೆ ನಿಧನರಾಗಿದ್ದಾರೆ ಎಂದು ಎಸ್ ಐಎಂಎಸ್ ಆಸ್ಪತ್ರೆಯ ವರದಿ ತಿಳಿಸಿದೆ.
59 ವರ್ಷದ ನಟ ವಿವೇಕ್ ಅವರು ಏಪ್ರಿಲ್ 15ರಂದು ಮೊದಲ ಕೋವಿಡ್ ಲಸಿಕೆಯನ್ನು ಪಡೆದಿದ್ದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ್ದ ಅವರು, ಯಾರೆಲ್ಲಾ ಲಸಿಕೆ ಪಡೆಯಲು ಅರ್ಹರೋ ಅವರೆಲ್ಲರೂ ಲಸಿಕೆ ಪಡೆಯುವಂತೆ ಮನವಿ ಮಾಡಿಕೊಂಡಿದ್ದರು.
ವಿವೇಕ್ 1989ರಲ್ಲಿ ಕೆ.ಎಸ್.ರವಿಕುಮಾರ್ ಅವರ “ಪುದು, ಪುದು ಅರ್ಥಂಗಳ್” ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿ ತೆರೆಗೆ ಪ್ರವೇಶಿಸಿದ್ದರು. ನೂರಾರು ಸಿನಿಮಾಗಳಲ್ಲಿ ನಟಿಸಿರುವ ವಿವೇಕ್ ದೇಶದ ಪ್ರತಿಷ್ಠಿತ ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.