ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ಜೋಕರ್ ಎಂದೇ ಜನಪ್ರಿಯರಾಗಿದ್ದ ತುಳಸಿ ಅವರು ಕೋವಿಡ್ 19 ಸೋಂಕಿಗೆ ತುತ್ತಾಗಿ ಚೆನ್ನೈನ ಆಸ್ಪತ್ರೆಯಲ್ಲಿ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮೇ 13 ರಿಂದ ಶಿವಮೊಗ್ಗ 4 ದಿನ ‘ಲಾಕ್’: ಹೋಲ್‌ಸೇಲ್ ದಿನಸಿ-ಎಪಿಎಂಸಿ ಬಂದ್
ಹಲವಾರು ಸಿನಿಮಾ, ನಾಟಕಗಳಲ್ಲಿ ತುಳಸಿ ಅಭಿನಯಿಸಿದ್ದರು. 1976ರಲ್ಲಿ ದೇವರಾಜ್-ಮೋಹನ್ ನಿರ್ದೇಶನದ “ಉಂಗಲಿಲ್ ಒರುತಿ” ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿಪರದೆಗೆ ಪ್ರವೇಶಿಸಿದ್ದರು. ನಂತರ ಇಳೈನಾರ್ ಆನಿ, ಉದಾನ್ ಪಿರಪ್ಪು, ಅವತಾರಾ ಪುರುಷನ್, ಮನ್ನೈ ತೊಟ್ಟು ಕುಂಬಿದಾನುಮ್ ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ತುಳಸಿ ನಟಿಸಿದ್ದರು.
ಜೋಕರ್ ಎಂದೇ ಪ್ರಸಿದ್ಧರಾಗಿದ್ದ ನಟ ತುಳಸಿ ಅವರ ಆಕಸ್ಮಿಕ ನಿಧನದ ಸುದ್ದಿ ಕೇಳಿ ದಕ್ಷಿಣ ಭಾರತ ಸಿನಿಮಾರಂಗದ ಗಣ್ಯರು, ಅಭಿಮಾನಿಗಳು, ಹಿತೈಷಿಗಳು ಟ್ವೀಟರ್ ಮೂಲಕ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ರಾಧಿಕಾ ಶರತ್ ಕುಮಾರ್, ಸೂರ್ಯ, ಕುಟ್ಟಿ ಪದ್ಮಿನಿ ಸೇರಿದಂತೆ ಹಲವಾರು ಮಂದಿ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಕೋವಿಡ್ 19 ಎರಡನೇ ಅಲೆಗೆ ಸಿನಿಮಾರಂಗದ ಗಣ್ಯ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಇತ್ತೀಚೆಗಷ್ಟೇ ಕೋವಿಡ್ ನಿಂದ ತಮಿಳು ನಿರ್ದೇಶಕ ತಾಮಿರಾ, ನಟಿ ಶಶಿಕಲಾ, ನಟ ರಾಹುಲ್ ವೊಹ್ರಾ, ನಿರ್ದೇಶಕ ಕೆವಿ ಆನಂದ್, ನಟ ಬಿಕ್ರಮ್ ಜಿತ್ ಕನ್ವರ್ ಪಾಲ್ ವಿಧಿವಶರಾಗಿದ್ದಾರೆ.