ಮಹಾರಾಷ್ಟ್ರ: 1975 ಮತ್ತು 1988ರ ಪರಮಾಣು ಪರೀಕ್ಷೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಖ್ಯಾತ ಭೌತಶಾಸ್ತ್ರಜ್ಞ ರಾಜಗೋಪಾಲ್ ಚಿದಂಬರಂ (88ವರ್ಷ) ಅವರು ಶನಿವಾರ ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ.
ಪ್ರಖ್ಯಾತ ಭೌತಶಾಸ್ತ್ರಜ್ಞ ಹಾಗೂ ಭಾರತದ ಪ್ರತಿಷ್ಠಿತ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ.ರಾಜಗೋಪಾಲ ಚಿದಂಬರಂ ಅವರು ನಿಧನರಾಗಿದ್ದು, ಇದೊಂದು ಅತ್ಯಂತ ದುಃಖದಾಯಕ ಸಂಗತಿ. ಚಿದಂಬರಂ ಅವರು ಭಾರತದ ವಿಜ್ಞಾನ ಕ್ಷೇತ್ರಕ್ಕೆ ಅಪ್ರತಿಮ ಕೊಡುಗೆಗಳನ್ನು ನೀಡಿದ್ದರು. ಅಷ್ಟೇ ಅಲ್ಲ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಅವರ ದೂರದೃಷ್ಟಿಯ ನಾಯಕತ್ವ ನಮಗೆ ಸದಾ ದಾರಿದೀಪ ಎಂದು ಡಿಪಾರ್ಟ್ ಮೆಂಟ್ ಆಫ್ ಅಟೋಮಿಕ್ ಎನರ್ಜಿ ಬಿಡುಗಡೆಗೊಳಿಸಿರುವ ಪ್ರಕಟನೆಯಲ್ಲಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಸಂತಾಪ:
ಖ್ಯಾತ ಭೌತಶಾಸ್ತ್ರಜ್ಞ ಡಾ.ರಾಜಗೋಪಾಲ ಚಿದಂಬರಂ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಡಾ.ರಾಜಗೋಪಾಲ ಅವರ ನಿಧನ ಆಘಾತವನ್ನುಂಟು ಮಾಡಿದ್ದು, ಭಾರತದ ಪರಮಾಣು ಕ್ಷೇತ್ರದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರವಾದದ್ದು. ಅವರ ವಿಶಿಷ್ಟ ಕೊಡುಗೆಗಾಗಿ ಇಡೀ ದೇಶವೇ ಅವರನ್ನು ನೆನಪಿಸಿಕೊಳ್ಳಬೇಕಾಗಿದೆ. ಅಲ್ಲದೇ ಅವರು ಮುಂಬರುವ ಪೀಳಿಗೆಗೆ ಪ್ರೇರಣೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ.